ದೋಟಿಹಾಳ: ಸಮೀಪದ ಶಿರಗುಂಪಿ ಗ್ರಾಪಂ ವ್ಯಾಪ್ತಿಯ ರ್ಯಾವಣಿಕಿ ಗ್ರಾಮದಲ್ಲಿ 10-15 ದಿನಗಳಿಂದ ಸುಮಾರು 50ಕ್ಕೂ ಹೆಚ್ಚು ಜನರು ಚಿಕೂನ್ ಗೂನ್ಯಾ ಮತ್ತು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ.
ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಚಿಕೂನ್ ಗೂನ್ಯಾದಿಂದ ನರಳುತ್ತಿದ್ದು, ಚಿಕಿತ್ಸೆಗಾಗಿ ದೋಟಿಹಾಳ, ಕುಷ್ಟಗಿ, ಇಲಕಲ್ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಅಲ್ಲದೇ ಗ್ರಾಮದ ಕೆಲವರು ಮೈ ಕೈ ನೋವು ಮತ್ತಿತರ ದೈಹಿಕ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ಮಂಜುನಾಥ ಹಿರೇಗೌಡ ಮಾತನಾಡಿ, ಒಂದು ವಾರದ ಹಿಂದೇ ಚಿಕೂನ್ ಗೂನ್ಯಾ ರೋಗ ಲಕ್ಷಣಗಳು ಕಂಡು ಬಂದಿದ್ದವು. ಕೈ ಕಾಲು ನೋವಿನಿಂದ ನರಕಯಾತನೆ ಅನುಭವಿಸಿದ್ದೇನೆ ಎಂದು ಹೇಳಿದರು.
ಸಲಹೆ: ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. sಇದರಿಂದ ಚಿಕೂನ್ ಗೂನ್ಯಾ, ಡೆಂಘಿ, ಮಲೇರಿಯಾದಂತಹ ಕಾಯಿಲೆಗಳು ಬರುತ್ತವೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದರಿಂದ ಕಾಯಿಲೆ ನಿಯಂತ್ರಿಸಬಹುದು. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಸಂಗ್ರಹಿಸುವ ಪಾತ್ರೆಗಳಿಗೆ ಮುಚ್ಚಳ ಹಾಕಬೇಕು. ಆಗಾಗೆ ಸ್ವತ್ಛಗೊಳಿಸಬೇಕು.ಕಾಯಿಲೆ ಲಕ್ಷಣ ಕಂಡುಬಂದರೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ತೆರೆಯಲಾದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಬೇಕು. ಗ್ರಾಮದ ಸುಮಾರು 20ಕ್ಕೂ ಹೆಚ್ಚು ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು. ಆದರೆ ಯಾರಲ್ಲೂ ಚಿಕೂನ್ ಗೂನ್ಯಾ ಕಂಡುಬಂದಿಲ್ಲ ಎಂದು ದೋಟಿಹಾಳ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ವೆಂಕಟೇಶ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ :ಹೆದ್ದಾರಿ ಟೋಲ್ ಪ್ಲಾಜಾ ಜಪ್ತಿಗೆ ಆದೇಶ
ರಸ್ತೆಗಳಲ್ಲಿ ನಿಂತ ಚರಂಡಿ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ರೋಗಗಳು ಬರುವ ಭೀತಿಯಲ್ಲಿ ಬದುಕಬೇಕಾಗಿದೆ. ನೈರ್ಮಲ್ಯದ ಬಗ್ಗೆ ಪಂಚಾಯಿತಿಗೆ ಕಾಳಜಿ ಇಲ್ಲದಾಗಿದೆ ಎಂದು ಗ್ರಾಮದ ನಾಗರಿಕರು ದೂರಿದರು.