ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ 150 ಕೋಟಿ ರೂ. ಅನುದಾನ ಕಳೆದ ಸಾಲಿನ 65 ಕಾಮಗಾರಿಗಳಿಗೆ ಸರ್ಕಾರ ಮಂಜೂರು ಮಾಡಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ ಟೆಂಡರ್ ಕರೆದು ಕಾಮಗಾರಿ ಕೆೃಗೆತ್ತಿಕೊಳ್ಳಬೇಕಾಗಿದ್ದು, 150 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯ, ಯಾತ್ರಿ ನಿವಾಸ ನಿರ್ಮಾಣ, ಡಾರ್ಮೆಟರಿ, ಕುಡಿಯುವ ನೀರು, ಶೌಚಾಲಯ, ವಾಹನ ಪಾರ್ಕಿಂಗ್, ನಾಮಫಲಕ ಅಳವಡಿಕೆ, ಕೂಡು ರಸ್ತೆ ಅಭಿವೃದ್ಧಿಗೆ ಮುಂದಾಗಲಿದೆ.
ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಿರೇಮಗಳೂರು ದೇವಾಲಯ, ಬೋಳರಾಮೇಶ್ವರ ದೇವಾಲಯ, ಮುಳ್ಳಯ್ಯನಗಿರಿ ಪ್ರದೇಶದಲ್ಲಿರುವ ಹೊನ್ನಮ್ಮನಹಳ್ಳ, ಮಾಣಿಕ್ಯಧಾರ, ಕವಿಗಲ್‌ಗಂಡಿ ನಗರದ ಬಸವನಹಳ್ಳಿ ಕೆರೆ ಅಭಿವೃದ್ಧಿಪಡಿಸಿ ಕೆರೆಯ ಏರಿ ಸುತ್ತ ಫೆನ್ಸಿಂಗ್ ಅಳವಡಿಕೆ, ವಾಕಿಂಗ್ ಪಾಥ್ ನಿರ್ಮಿಸಿ ನಗರಕ್ಕೆ ಆಗಮಿಸುವ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ದೋಣಿ ವಿಹಾರ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿದು ಬಂದಿದೆ.
ಅದೇ ರೀತಿ ಕೋಟೆಕೆರೆ, ಹಿರೇಕೊಳಲೆ ಕೆರೆ, ಮೂಗ್ತಿಹಳ್ಳಿ ಕೆರೆ, ಆಜಾದ್ ರಸ್ತೆ, ಬೆಳವಾಡಿ ವೀರನಾರಾಯಣ ದೇವಾಲಯ, ಖಾಂಡ್ಯ ದೇವಾಲಯ, ಬಾಳೆಹೊನ್ನೂರು, ಶೃಂಗೇರಿಯ ಸಿರಿಮನೆ ಜಲಪಾತ, ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ, ತರೀಕೆರೆಯ ಅಕ್ಕನಾಗಲಾಂಬಿಕೆ ಗದ್ದುಗೆ, ಸೊಲ್ಲಾಪುರ, ಕಡೂರಿನ ಸಖರಾಯಪಟ್ಟಣ, ಕವಿಲಕ್ಷೀಶನ ದೇವನೂರು ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮುಂದಾಗಿದ್ದಾರೆ.
ಮೊದಲ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, 15 ದಿನದೊಳಗೆ 150 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿದು ಬಂದಿದೆ. ಟೆಂಡರ್ ಮೂಲಕ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಆತಿಥ್ಯ ನೀಡಲು 350 ಹೋಂಸ್ಟೇಗಳು ಸರ್ಕಾರದ ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ ಹೆಚ್ಚು ಹೋಂಸ್ಟೇಗಳಿದ್ದು ಎರಡನೇ ಸ್ಥಾನ ಮೂಡಿಗೆರೆ ಪಡೆದುಕೊಂಡಿದೆ. 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 72.ಲಕ್ಷ ದೇಶಿ ಹಾಗೂ ವಿದೇಶಿಯರು ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಶೃಂಗೇರಿಗೆ 39.30 ಲಕ್ಷ, ಹೊರನಾಡು 22.17 ಲಕ್ಷ, ಕಳಸ 4.63ಲಕ್ಷ, ದತ್ತಪೀಠ 3.52ಲಕ್ಷ, ಕೆಮ್ಮಣ್ಣುಗುಂಡಿಗೆ ಕೆಮ್ಮಣ್ಣುಗುಂಡಿ 1.54 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಜೂನ್, ಆಗಸ್ಟ್, ಸೆಪ್ಪೆಂಬರ್ ತಿಂಗಳಲ್ಲಿ ಜಿಲ್ಲಾದ್ಯಂತ ಭಾರೀ ಮಳೆಯಿಂದ ಪ್ರವಾಸಿಗ ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿದ್ದು, ಶೃಂಗೇರಿಗೆ ಜೂನ್ ತಿಂಗಳಲ್ಲಿ 1.65 ಲಕ್ಷ, ಕಳಸಕ್ಕೆ 1.50 ಲಕ್ಷ ಜೂನ್ 10ಸಾವಿರ ಕಡಿಮೆ ಪ್ರವಾಸಿಗರು ಆಗಮನವಾಗಿದೆ.
ಹೊರನಾಡಿಗೆ ಡಿಸೆಂಬರ್‌ನಲ್ಲಿ 5ಲಕ್ಷ, ಆಗಸ್ಟ್‌ನಲ್ಲಿ 75 ಸಾವಿರ, ಬಾಳೆಹೊನ್ನೂರಿಗೆ ಡಿಸೆಂಬರ್ ತಿಂಗಳಿನಲ್ಲಿ ಅಧಿಕ 1.20 ಲಕ್ಷ, ಹೊರನಾಡಿಗೆ ಅಧಿಕ 15ಸಾವಿರ ಭಕ್ತರು ಡಿಸೆಂಬರ್‌ನಲ್ಲಿ ಭೇಟಿ ನೀಡಿದ್ದಾರೆ.