Advertisement

ಎಸ್ಸೆಸ್ಸೆಲಿಯಲ್ಲಿ ಒಂದಂಕಿ ಫಲಿತಾಂಶಕ್ಕೆ ಯತ್ನ

12:34 PM Jan 26, 2020 | Naveen |

ಚಿಕ್ಕಮಗಳೂರು: 2019-20ನೇ ಸಾಲಿನ ಎಸ್‌ ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಒಂದಂಕಿಯೊಳಗೆ ತರಲು ಪಣತೊಟ್ಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಮುಂದಾಗಿದೆ. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.

Advertisement

2019-20ನೇ ಸಾಲಿನಲ್ಲಿ 14ನೇ ಸ್ಥಾನದಿಂದ ಕೆಳಗಿಳಿಯದಂತೆ ಮತ್ತು ಒಂದಂಕಿಯೊಳಗಿನ ಸ್ಥಾನ ಪಡೆಯಲು ಮುಂದಾಗಿದ್ದು, ಜಿಲ್ಲೆಯಿಂದ ಒಟ್ಟು 13,328 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಆ ಪೈಕಿ 12,378 ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆ ಎದುರಿಸಲಿದ್ದಾರೆ.

ಉಳಿದಂತೆ 284 ಖಾಸಗಿ ವಿದ್ಯಾರ್ಥಿಗಳು, 561 ಪುನರಾವರ್ತಿತ ವಿದ್ಯಾರ್ಥಿಗಳು, 100 ಖಾಸಗಿ ಪುನರಾವರ್ತಿತ, 3 ಎನ್‌ಆರ್‌ಸಿ ಹಾಗೂ ಎರಡು ಎನ್‌ಎಸ್‌ಪಿಆರ್‌ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿರುವ ಶಿಕ್ಷಣ ಇಲಾಖೆ ಈಗಾಗಲೇ ಅನೇಕ ಯೋಜನೆಗಳನ್ನು ರೂಪಿಸಿದ್ದು, ಶಿಕ್ಷಣ ಇಲಾಖೆ ಮುಖ್ಯಶಿಕ್ಷಕರ ಪಾತ್ರ, ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು, ಪೋಷಕರು-ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸೂಚಿಸಲಾಗಿದೆ.

ಸಾಲು ಸಾಲು ಸಭೆಗಳು: ಫಲಿತಾಂಶದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಹಿರಿಯ ಅಧಿಕಾರಿಗಳು, ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಭೆಗಳನ್ನು ನಡೆಸಲಾಗಿದೆ. 2019ರ ಮೇ 14 ರಂದು ಸಭೆ ನಡೆಸಿ ಶಾಲೆಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ಕ್ರಿಯಾ ಯೋಜನೆ ರೂಪಿಸಲಾಗಿದೆ.

2019ರ ಮೇ 28 ರಂದು ಜಿಲ್ಲಾಧಿ ಕಾರಿ ಸೇರಿದಂತೆ ಹಿರಿಯ ಅಧಿ ಕಾರಿಗಳ ಸಭೆ ನಡೆಸಲಾಗಿದೆ. 2019ರ ಜುಲೈ 10ರಂದು ಬದಲಾದ ಪ್ರಶ್ನೆ ವಿನ್ಯಾಸದ ಕುರಿತು ಸಭೆ ನಡೆಸಲಾಗಿದೆ. 2019 ಜುಲೈ 12ರಂದು ಕ್ಲಿಷ್ಟ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

Advertisement

ನೋಡೆಲ್‌ ಅಧಿಕಾರಿಗಳ ನೇಮಕ: 2019ರ ಫಲಿತಾಂಶದಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಯ 27 ಶಾಲೆಗಳನ್ನು ಗುರುತಿಸಿ ನೋಡೆಲ್‌ ಅ ಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನೋಡೆಲ್‌ ಅಧಿ ಕಾರಿಗಳು ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಪಾಠ-ಪ್ರವಚನಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ರಾತ್ರಿ ಶಾಲೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಈಗಾಗಲೇ ಕೆಲ ಶಾಲೆಗಳಲ್ಲಿ ರಾತ್ರಿ ಶಾಲೆ ಆರಂಭಿಸಲಾಗಿದೆ. ಶೃಂಗೇರಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ, ತೊರೆಹಕ್ಲು, ಹೊಳೆಕೊಪ್ಪ, ನೆಮ್ಮಾರ್‌, ಎಸ್‌ಜೆವಿಪಿ ಶಾಲೆ, ಜೇಸಿಎಸ್‌ ಶಾಲೆ, ದರ್ಶಿನಿ ಪ್ರೌಢಶಾಲೆ, ಜ್ಞಾನಭಾರತಿ ವಿದ್ಯಾಕೇಂದ್ರ, ಬಿಆರ್‌ವಿ ಪ್ರೌಢಶಾಲೆಗಳಲ್ಲಿ ರಾತ್ರಿ ಶಾಲೆಗಳನ್ನು ಆರಂಭಿಸಲಾಗಿದೆ. ಅದೇ ರೀತಿ ಬೀರೂರು ವಿಭಾಗದ ರೇವಣಸಿದ್ದೇಶ್ವರ ಪ್ರೌಢಶಾಲೆ, ಅಕ್ಕಮಹಾದೇವಿ ಪ್ರೌಢಶಾಲೆ, ಗ್ರಾಮಾಂತರ ಪ್ರೌಢಶಾಲೆಗಳಲ್ಲಿ ರಾತ್ರಿ ಶಾಲೆ ಆರಂಭಿಸಲಾಗಿದೆ. ಕಡೂರು ತಾಲೂಕಿನ ಗುರುಕೃಪ ಪ್ರೌಢಶಾಲೆ ಗಿರಿಯಾಪುರ, ಆಸಂದಿ ಪ್ರೌಢಶಾಲೆ, ದಿ.ದೇವರಾಜ ಅರಸು ಪ್ರೌಢಶಾಲೆ, ಮಲ್ಲಿಕಾರ್ಜುನ ಪ್ರೌಢಶಾಲೆ ಹಿರೆನಲ್ಲೂರು
ಶಾಲೆಗಳಲ್ಲಿ ರಾತ್ರಿ ಶಾಲೆ ಆರಂಭಿಸಲಾಗಿದೆ. ಕೊಪ್ಪ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗ ಬಾಳಗಡಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಕೊಪ್ಪ ಈ ಶಾಲೆಗಳಲ್ಲಿ ರಾತ್ರಿ ಶಾಲೆ ಆರಂಭಿಸಲಾಗಿದೆ.

ಪ್ರತಿ ಶನಿವಾರ ವಿಶೇಷ ತರಗತಿ: ಪ್ರತಿ ಶನಿವಾರ ತರಗತಿಗಳು ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಕ್ಲಿಷ್ಟ ಎನಿಸುವ ವಿಷಯದ ಕುರಿತು ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಹತ್ತಿರದ ಮೂರ್ನಾಲ್ಕು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಕ್ಲಿಷ್ಟ ವಿಷಯಗಳ ಕುರಿತು ಸಂಪನ್ಮೂಲ ಶಿಕ್ಷಕರಿಂದ ಮಾರ್ಗದರ್ಶನ ಕಾರ್ಯಕ್ರಮ ನಡೆಸಲಾಗಿದೆ. ಪರೀಕ್ಷೆ ಭಯ ನಿವಾರಣೆಗೆ 2020ರಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯನ್ನು ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲಾಗಿರುವ 58 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಗೈರು ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ: ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅನಧಿ ಕೃತವಾಗಿ ಗೈರು ಹಾಜರಾಗುತ್ತಿದ್ದರೆ ಅಂತಹ ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ಮತ್ತು ಎಸ್‌ ಡಿಎಂಸಿ ಸದಸ್ಯರು ಭೇಟಿ ನೀಡಿ ವಿದ್ಯಾರ್ಥಿ ಗೈರುಹಾಜರಾಗುತ್ತಿರುವ ಬಗ್ಗೆ ಪೋಷಕರ ಗಮನಕ್ಕೆ ತರಲಾಗುತ್ತಿದೆ. ಇದರೊಂದಿಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಕಲಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಮಿಸ್ಡ್ಕಾಲ್‌ ನೀಡುವ ಮತ್ತು ವಿಶೇಷ ತರಗತಿ ನಡೆಸಲಾಗುತ್ತಿದೆ.

ಒಟ್ಟಾರೆ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಒಂದಂಕಿಯೊಳಗಿನ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಭರ್ಜರಿ ತಯಾರಿ ನಡೆಸುತ್ತಿದ್ದು, ಶಿಕ್ಷಕರು ಮತ್ತು ಅಧಿಕಾರಿ ವರ್ಗ ಅವಿರತ ಶ್ರಮಿಸುತ್ತಿದೆ.

ಸಂಜೆ ಗುಂಪು ಅಧ್ಯಯನ
ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ದಿನದ ತರಗತಿ ಮುಗಿದ ಬಳಿಕ ಸಂಜೆ ವಿದ್ಯಾರ್ಥಿಗಳನ್ನು ಗುಂಪು ಅಧ್ಯಯನಕ್ಕೆ ಬಿಡಲಾಗುತ್ತಿದೆ. ಯಾವುದೇ ಕ್ಲಿಷ್ಟ ವಿಷಯಗಳನ್ನು ವಿದ್ಯಾರ್ಥಿಗಳೇ ತಮ್ಮ ತಮ್ಮಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗುಂಪು ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಳಗ್ಗೆ 9 ಗಂಟೆಯಿಂದಲೇ ತರಗತಿ ತಗೆದುಕೊಳ್ಳುತ್ತಿದೇವೆ. ಶನಿವಾರ ಮಧ್ಯಾಹ್ನದ
ನಂತರವೂ ಎಸ್‌ ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪೋಷಕರೊಂದಿಗೆ ಚರ್ಚಿಸುತ್ತಿದ್ದೇವೆ. ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ.
ಹುಳಿಗೆರೆ ಮಲ್ಲಿಕಾರ್ಜುನ್‌,
ಶಿಕ್ಷಕರು

2019-20ನೇ ಸಾಲಿನ ಎಸ್‌ ಎಸ್‌ಎಲ್‌ಸಿ ಫಲಿತಾಂಶದಲ್ಲಿ 10ರೊಳಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಜನವರಿ ತಿಂಗಳಲ್ಲಿ ಶಾಲಾ ಹಂತದಲ್ಲಿ ಸರಣಿ ಪರೀಕ್ಷೆಗಳು ನಡೆಯುತ್ತಿವೆ. ಫೆ.17ರಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ.
ಕೆ.ಎಸ್‌. ಜಯಣ್ಣ,
ಪ್ರಭಾರ ಡಿಡಿಪಿಐ

„ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next