ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಜಿಲ್ಲೆಯ ಯಾವುದೇ ಪರೀಕ್ಷಾರ್ಥಿಯೂ ವಂಚಿತರಾಗದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದರು.
ಬುಧವಾರ ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ 2019-20ನೇ ಸಾಲಿನ ಎಸ್ ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವಿಶೇಷವಾಗಿ ಪರಿಗಣಿಸಿದ್ದು, ಶಿಕ್ಷಣ, ಆರೋಗ್ಯ, ಪೊಲೀಸ್ ಮತ್ತು ಸಾರಿಗೆ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಬೇಕು. ಇದೇ ಜೂ.25 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಯಾವುದೇ ಲೋಪ-ದೋಷಗಳಿಲ್ಲದೆ ಯಶಸ್ವಿಯಾಗಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಮಾಹಿತಿ ಪಡೆದು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಮಲೆನಾಡು ಭಾಗಗಳಲ್ಲಿ ಅಗತ್ಯವಿದ್ದಲ್ಲಿ ಖಾಸಗಿ ವಾಹನಗಳನ್ನು ಬಳಸಿಕೊಂಡು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ತಲುಪಿಸುವ ಕಾರ್ಯ ಮಾಡಬೇಕು ಎಂದರು. ಜಿಲ್ಲೆಯ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್ ಪರೀಕ್ಷೆ ನಡೆಸಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ತಿಳಿಸಬೇಕು. ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದರು.
ಜಿಪಂ ಸಿಇಒ ಎಸ್.ಪೂವಿತಾ ಮಾತನಾಡಿ, ಕೋವಿಡ್-19ರ ಹಿನ್ನೆಲೆ ಸರ್ಕಾರ ಈ ಬಾರಿಯ ಎಸ್ ಎಸ್‌ಎಲ್‌ಸಿ ಪರೀಕ್ಷೆಯನ್ನು ವಿವಿಧ ಮಾರ್ಗಸೂಚಿ ಅನ್ವಯ ನಡೆಸಲು ಸೂಚಿಸಿದೆ. ಅದರಂತೆ ಪರೀಕ್ಷಾ ಕೇಂದ್ರಗಳಿಗೆ ತಲುಪಲು ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು. ಆರೋಗ್ಯಾಧಿಕಾರಿ ಡಾ| ಭರತ್ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಿನ್ನೆಲೆ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 8.30ಕ್ಕೆ ವಿದ್ಯಾರ್ಥಿಗಳು ಹಾಜರಿರಬೇಕು. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷಾ ಕೊಠಡಿಗಳಿಗೆ ಹಾಜರಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಡಿಡಿಪಿಐ ಸಿ.ನಂಜಯ್ಯ ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲೆಯ ಒಟ್ಟು 58 ಪರೀಕ್ಷಾ ಕೇಂದ್ರಗಳಲ್ಲಿ 13,924 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗೆ ವಿವಿಧ ಸಂಘ-ಸಂಸ್ಥೆಗಳಿಂದ 2 ಮಾಸ್ಕ್ ವಿತರಿಸಲಾಗುತ್ತಿದೆ ಎಂದರು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಸಹಾಯ ಪಡೆಯಲಾಗಿದೆ. ಪ್ರತಿ ತಾಲೂಕಿಗೆ 2 ರಂತೆ ಜಿಲ್ಲಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ 1 ಪರೀಕ್ಷಾ ಕೇಂದ್ರವನ್ನು ಕಾಯ್ದಿರಿಸಲಾಗಿದೆ. ತಾಲೂಕಿಗೆ ಒಬ್ಬರಂತೆ ಎಲ್ಲಾ ತಾಲೂಕಿನಲ್ಲಿಯೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಸರ್ವಶಿಕ್ಷಣ ಅಭಿಯಾನದ ಸಹನಿರ್ದೇಶಕ ಚಂದ್ರಪ್ಪ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತರ ಜಿಲ್ಲಾ ವೀಕ್ಷಕರಾದ ಪುಟ್ಟರಾಜು, ಡಯಟ್ ಪ್ರಾಂಶುಪಾಲೆ ಪುಷ್ಪಲತಾ ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷೆ ಸುಗಮವಾಗಿ ಬರೆಯಲು ಉತ್ತಮ ವಾತಾವರಣ ಕಲ್ಪಿಸಬೇಕು. ಅನಾರೋಗ್ಯದ ಲಕ್ಷಣಗಳಿದ್ದಲ್ಲಿ ಮಕ್ಕಳಲ್ಲಿ ಭಯ ಹುಟ್ಟಿಸುವುದು ಬೇಡ. ಈ ಬಗ್ಗೆ ಧೈರ್ಯ ತುಂಬಿ ಪ್ರತೇಕ ಕೊಠಡಿಯಲ್ಲಿ ಪರೀಕ್ಷೆಗೆ ಅನುವು ಮಾಡಿಕೊಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿ.ವಿ. ಪರಿಶೀಲಿಸಬೇಕು.
ಎಸ್.ಪೂವಿತಾ,
ಜಿಪಂ ಸಿಇಒ