Advertisement

ಮಹಾಪುರುಷರ ಆದರ್ಶ ಪಾಲಿಸಿ

05:01 PM Feb 16, 2020 | Team Udayavani |

ಚಿಕ್ಕಮಗಳೂರು: ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಹಾಪುರುಷರ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದು ತಹಶೀಲ್ದಾರ್‌ ನಂದಕುಮಾರ್‌ ತಿಳಿಸಿದರು.

Advertisement

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್‌ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಶರಣರ, ಮಹಾತ್ಮರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಬಾರದು. ಸರ್ವರೂ ಅವರ ತತ್ವ, ಆದರ್ಶಗಳನ್ನು ಪಾಲಿಸುವಂತಾಗಬೇಕು. ಅವರ ಉತ್ತಮ ಗುಣಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಬಂಜಾರ ಸಮುದಾಯ ತನ್ನ ವಿಶಿಷ್ಟ ಉಡುಗೆ, ಗಾಯನ, ನೃತ್ಯ, ಕಲೆ, ಸಂಸ್ಕೃತಿಯ ಮೂಲಕ ಸಮಾಜಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಇಂತಹ ಸಮುದಾಯದವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು ಎಂದು ಹೇಳಿದರು. ಬಂಜಾರ ಸೇವಾ ಸಂಘದ ಅಧ್ಯಕ್ಷ ಪ್ರೊ| ಚಂದ್ರಶೇಖರ್‌ ಆರ್‌.ನಾಯಕ್‌ ಉಪನ್ಯಾಸ ನೀಡಿ, ಎಲ್ಲೆಡೆ ಸಂತ ಸೇವಾಲಾಲ್‌ ಅವರ 281ನೇ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಸಂಸ್ಕೃತಿಯ ಮೂಲಕ ಅನನ್ಯತೆಯನ್ನು ಎತ್ತಿ ಹಿಡಿದ ಸಮಾಜ ಇದಾಗಿದೆ. ಇಂತಹ ಸಮುದಾಯದಲ್ಲಿ ಜನರ ಉದ್ಧಾರಕ್ಕಾಗಿ ಹುಟ್ಟಿದ ಸಂತ ಸೇವಾಲಾಲರು ಶ್ರೇಷ್ಠರು ಎಂದು ಹೇಳಿದರು.

ಬದುಕಿನಲ್ಲಿ ಸತ್ಯ, ನಿಷ್ಠೆಯಿಂದ ಬಾಳಿ ತಮ್ಮಲ್ಲಿನ ಗುಣಗಳನ್ನು ಜನಾಂಗಕ್ಕೂ ಬೋಧನೆ ಮಾಡಿ, ಅರಣ್ಯವಾಸಿ ಜನಾಂಗವನ್ನು ರಕ್ಷಿಸುತ್ತಾ ಬಂದಿದ್ದಾರೆ. ಹಾಗಾಗಿ, ಲಂಬಾಣಿ ತಾಂಡಾಗಳಲ್ಲಿ ಸೇವಾಲಾಲ್‌ ಅವರ ದೇವಸ್ಥಾನಗಳನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು. ಸಮುದಾಯದವರು ಪೂರ್ವಕಾಲದಲ್ಲಿ ಮೂಲತಃ ರಾಜಸ್ಥಾನದಿಂದ ವಲಸೆ ಬಂದಿದ್ದು, ಇಂದು ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಸಮುದಾಯವನ್ನು ವಿಸ್ತರಿಸಿಕೊಂಡಿದ್ದಾರೆ. ಅರಣ್ಯ ವಾಸಿಗಳಾಗಿ ನೆಲೆಸಿದ್ದ ಇವರು ಸಂವಿಧಾನ ಜಾರಿಗೆ ಬಂದ ಬಳಿಕ ಮುಖ್ಯ ವಾಹಿನಿಗೆ ಬಂದು ನೆಲೆಸಿದ್ದಾರೆ ಎಂದರು.

ಸಮಾಜಕ್ಕೆ ಅಗತ್ಯವಾದ ದೈನಂದಿನ ವಸ್ತುಗಳನ್ನು ಪೂರೈಸುತ್ತಾ ಬಂದ ಈ ಸಮುದಾಯದವರು, ಪೂರ್ವದಲ್ಲಿ ಮೊಘಲ್‌ ಅರಸರ ಆಡಳಿತದ ವೇಳೆಯಲ್ಲಿ ಆಹಾರ ಧಾನ್ಯಗಳನ್ನು ಪೂರೈಸಿ ವರ್ತಕರ ಕೆಲಸ ಮಾಡುವುದರ ಜೊತೆಗೆ ಸೈನಿಕ ವೃತ್ತಿಯಲ್ಲೂ ಪ್ರಾವೀಣ್ಯತೆ ಪಡೆದಿದ್ದರು ಹಾಗೂ ಕೆಳಸ್ತರದ ಜನಾಂಗವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ ಸತ್ಯತೆಯನ್ನು ಸಮಾಜಕ್ಕೆ ಪ್ರಸ್ತುತಪಡಿಸಿದರು ಎಂದು ಹೇಳಿದರು.

Advertisement

ತಾಲೂಕು ಪಂಚಾಯತ್‌ ಸದಸ್ಯ ಆನಂದ ನಾಯ್ಕ ಮಾತನಾಡಿ, ಕಸೂತಿ ಕೆಲಸವನ್ನು ಮುಖ್ಯ ಕಸುಬನ್ನಾಗಿಸಿಕೊಂಡ ಬಂಜಾರ ಸಮುದಾಯದವರು ತಯಾರಿಸಿದಂತಹ ಕಸೂತಿಯ ಬಂಜಾರ ಉಡುಪುಗಳು ಇಂದಿಗೂ ದೇಶ-ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿವೆ. ಈ ಸಮುದಾಯ ಕಲೆ ಮತ್ತು ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ ಎಂದು ಹೇಳಿದರು.

ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ ಕರ್ನಾಟಕ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಮುಂದಿನ ದಿನಗಳಲ್ಲಿ ಬಂಜಾರ ಅಕಾಡೆಮಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರಮೇಶ್‌, ದಲಿತ ಮುಖಂಡ ಕೆ.ಟಿ ರಾಧಾಕೃಷ್ಣ, ಶ್ರೀ ಸೇವಾಲಾಲ್‌ ಬಂಜಾರ ಸೇವಾ ಸಂಘದ ಅಧ್ಯಕ್ಷ ರಾಮಾನಾಯ್ಕ, ಜಿಲ್ಲಾ ಸರ್ಜನ್‌ ಡಾ| ಕುಮಾರ್‌ ನಾಯ್ಕ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next