Advertisement

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಮುಖ್ಯ

05:59 PM Dec 30, 2019 | Naveen |

ಚಿಕ್ಕಮಗಳೂರು: ಶಿಕ್ಷಣದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅವಿಭಾಜ್ಯ ಅಂಗವಾಗಬೇಕು ಎಂದು ಡಿಡಿಪಿಐ ಜಯಣ್ಣ ನುಡಿದರು.

Advertisement

ವಾಸವಿ ವಿದ್ಯಾಸಂಸ್ಥೆಯ 38ನೇ ವಾರ್ಷಿಕೋತ್ಸವವನ್ನು ಶಾಲಾ ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಪಠ್ಯಕ್ಕಷ್ಟೇ ಸೀಮಿತವಲ್ಲ. ಪೋಷಕರು ತಮ್ಮ ಮಕ್ಕಳನ್ನು ವೈದ್ಯ-ಇಂಜಿನಿಯರ್‌ ಆಗಿ ನೋಡಲು ಬಯಸುತ್ತಾರೆ. ಮಕ್ಕಳ ಆಸಕ್ತಿ ಅಭಿರುಚಿಗೆ ಸ್ವಾತಂತ್ರ್ಯ ಕೊಡಬೇಕು. ಇಲ್ಲದಿದ್ದರೆ ಅವರಲ್ಲಿ ನೈತಿಕ ಮೌಲ್ಯಗಳನ್ನು ಕಾಣಲು ಕಷ್ಟಸಾಧ್ಯ. ಮಕ್ಕಳು ಪರಿಸರದ ಅವಕಾಶದಿಂದ ವಂಚಿತರಾಗಬಾರದು ಎಂದು ಹೇಳಿದರು.

ಸರ್ಕಾರಿ ಶಾಲೆಯ ಮಕ್ಕಳು ಒಬ್ಬಂಟಿಯಾಗಿ ಎಲ್ಲೆಡೆ ಓಡಾಡಲು ಸಾಧ್ಯ. ಅದೇ ಖಾಸಗಿ ಶಾಲೆ ಮಕ್ಕಳು ಒಬ್ಬರೆ ಓಡಾಡಲು ಹಿಂಜರಿಯುತ್ತಾರೆ. ಖಾಸಗಿ ಶಾಲಾ ಮಕ್ಕಳನ್ನೂ ಸಹ ಸ್ವತಂತ್ರವಾಗಿ
ಬೆಳೆಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ- ಧೈರ್ಯ-ಸ್ಥೈರ್ಯಗಳನ್ನು ಮೂಡಿಸಿದಾಗ ಅವರು ದೇಶಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತಾರೆ.

ನಗರದಲ್ಲಿ 38 ವರ್ಷಗಳಿಂದ ಸುಸಜ್ಜಿತವಾಗಿ ಶಿಕ್ಷಣ ನೀಡುತ್ತಿರುವ ವಾಸವಿ ವಿದ್ಯಾಲಯ ಉತ್ತಮ ಫಲಿತಾಂಶದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಗಣನೀಯ ಸಾಧನೆ ಮಾಡಿದೆ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಎಸ್‌.ಆರ್‌. ಮಂಜುನಾಥ ಪ್ರತಿಭಾವಂತರನ್ನು ಸನ್ಮಾನಿಸಿ ಮಾತನಾಡಿ, ಸೂರ್ಯನಷ್ಟು ಹೊಳೆಯಲು ಸೂರ್ಯನಷ್ಟೇ ಸುಡಬೇಕೆಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಹೇಳುತ್ತಿದ್ದರು. ಕಠಿಣ ಪರಿಶ್ರಮದೊಂದಿಗೆ ನಿಶ್ಯಬ್ಧವಾಗಿ ಓದಿ, ಓದಿದ್ದನ್ನು ಸರಿಯಾಗಿ ಮನನ ಮಾಡಿದರೆ
ಯಶಸ್ಸು ಭೋರ್ಗರೆಯುತ್ತ ಹಿಂಬಾಲಿಸುತ್ತದೆ ಎಂದರು.

Advertisement

ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದು. ಪ್ರತಿನಿತ್ಯ ಅಂದಿನ ಪಾಠ, ಪ್ರವಚನಗಳನ್ನು ಓದಿ ಹೋಂವರ್ಕ್‌ ಮಾಡುವಂತೆ ಪ್ರೇರೇಪಿಸಬೇಕು. ತಾಯಂದಿರೆ ಸಂಜೆಯಾಗುತ್ತಿದ್ದಂತೆ ಧಾರಾವಾಹಿಗಳನ್ನು ನೋಡುತ್ತಾ ಕುಳಿತರೆ
ಸಹಜವಾಗಿಯೇ ಮಕ್ಕಳ ಮನಸ್ಸು ಸಡಿಲವಾಗುತ್ತದೆ. ಕೇರಳ ರಾಜ್ಯದ ಒಂದು ಜಿಲ್ಲೆಯಲ್ಲಿ ತಂದೆ-ತಾಯಿಗಳು 7 ಗಂಟೆಯ
ಮೇಲೆ ಟಿ.ವಿ ನೋಡುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ವಿವರಿಸಿದರು.

ಕಠಣ ಪರಿಶ್ರಮ ಪ್ರತಿಭೆಯನ್ನು ಹಿಂದಿಕ್ಕುತ್ತದೆ. ಅಧಿಕ ಅಂಕ ಪಡೆಯಲು ಬಹಳಷ್ಟು ಶ್ರಮಪಡಬೇಕು. ಅವಮಾನ, ನೋವು, ಸಂಕಟ, ಕಷ್ಟ, ಸಹಿಸಿ ಎಡವಿದರೂ ಧೃತಿಗೆಡದೆ ಮುನ್ನಡೆದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಕಿವಿಮಾತು
ಹೇಳಿದರು.

ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಸ್‌. ವೆಂಕಟೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಮನಸ್ಸುಗಳು ಸರಿಯಾದ ನಿಟ್ಟಿನಲ್ಲಿ ಅರಳಲು ಸಕಾರಾತ್ಮಕವಾದ ವಾತಾವರಣ ಸೃಷ್ಟಿಸುವ ಆಶಯ ಶಾಲೆಯಲ್ಲಿದೆ. ಇಲ್ಲಿ ಮಕ್ಕಳೆ ನಿಜ ಜೀವನದ ನಾಯಕ, ನಾಯಕಿಯರೆಂಬ ಭಾವನೆ ನಮ್ಮದು. ಅವರಲ್ಲಿ ಸದ್ಗುಣಗಳನ್ನು
ಬಿತ್ತಿ, ಆತ್ಮವಿಶ್ವಾಸವನ್ನು ಹೆಚ್ಚಿಸಿ, ಭಾಷೆಯ ಮೇಲೆ ಪ್ರಭುತ್ವ ಸಾಧಿಸುವುದರ ಜತೆಗೆ ಮಕ್ಕಳ ಸರ್ವಾಂಗೀಣ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಕಳೆದ 11 ವರ್ಷಗಳಿಂದ ಎಸ್‌ಎಸ್‌ಎಲ್‌ ಸಿಯಲ್ಲಿ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಕಳೆದ ಸಾಲಿನಲ್ಲಿ 46 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 19ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಮತ್ತು 26ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಎಂ.ಆರ್‌.ರಾಜಶೇಖರ್‌ ಮಾತನಾಡಿ, ಶಿಕ್ಷಣದಲ್ಲಿ ತಾಂತ್ರಿಕತೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿಯಲ್ಲಿ ಪ್ರಯತ್ನಿಸಲಾಗುತ್ತಿದೆ. ಶಾಲಾ ಶಿಕ್ಷಕರ ಪ್ರಯತ್ನದ ಜತೆಗೆ ಮನೆಯಲ್ಲಿ ಪೋಷಕರೂ ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿ ವಹಿಸಬೇಕು. ಮೊಬೈಲ್‌ಗಿಂತ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಸಹ ಕಾರ್ಯದರ್ಶಿ ಜಿ.ಎ.ದಿನೇಶ್‌ಗುಪ್ತ ಶಾಲಾ ಶಿಕ್ಷಕರನ್ನು ಗೌರವಿಸಿದರು. ಎಸ್‌ಎಸ್‌ ಎಲ್‌ಸಿಯಲ್ಲಿ ಶೇ.98ಅಂಕಗಳಿಸಿದ ಸಾದಿಕ್‌ ಹುಸೇನ್‌ ಮತ್ತು 7ನೇ ತರಗತಿಯಲ್ಲಿ ಶೇ.99ಅಂಕಗಳಿಸಿದ ದೀಕ್ಷಿತ್‌ರನ್ನು ಶಿಕ್ಷಕ ರಮೇಶ್‌ ಬೊಂಗಾಳೆ ಪರಿಚಯಿಸಿದರು.

ಕಾರ್ಯದರ್ಶಿ ಜಯಂತಿಶೇಖರ್‌ ಸ್ವಾಗತಿಸಿದರು. ಮುಖ್ಯಶಿಕ್ಷಕ ಬಿ.ಆರ್‌. ಕುಮಾರ್‌ ವಾರ್ಷಿಕ ವರದಿ ಓದಿದರು. ಶಿಕ್ಷಕಿ ಚೂಡಾಮಣಿ ವಂದಿಸಿದರು. ಶಾಲಾ ಮಕ್ಕಳಿಂದ ಆಕರ್ಷಕ ಕವಾಯತ್‌ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next