Advertisement

ಮಿನಿ ವಿಮಾನ ನಿಲ್ದಾಣಕ್ಕೆ ಬೇಕು ಕಾಯಕಲ್ಪ

01:23 PM Mar 05, 2020 | Naveen |

ಚಿಕ್ಕಮಗಳೂರು: ಮಿನಿ ವಿಮಾನ ಹಾರಾಡಬೇಕಾಗಿದ್ದ ಮಿನಿ ವಿಮಾನ ನಿಲ್ದಾಣ ಮೋಜು-ಮಸ್ತಿಯ ಅಡ್ಡವಾಗಿ ಮಾರ್ಪಟ್ಟಿದ್ದು, ವಿಮಾನ ನಿಲ್ದಾಣ ದುರಸ್ತಿ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕೆಂಬುದು ಜನರ ಆಗ್ರಹವಾಗಿದೆ.

Advertisement

ರಾಜ್ಯ ಮತ್ತು ದೇಶದ ನಾನಾ ಭಾಗಗಳಿಂದ ಜಿಲ್ಲೆಯ ಯಾತ್ರಾ ಸ್ಥಳಗಳಿಗೆ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಿಗೆ ಅನುಕೂಲವಾಗಲಿ ಮತ್ತು ವಾಣಿಜ್ಯೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ನಗರದ ಹೊರವಲಯದ ಅಂಬಳೆ ಮುಖ್ಯ ರಸ್ತೆಯ ಪಕ್ಕದಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಜಾಗವನ್ನು ಗುರುತಿಸಿದ್ದರು. ಆದರೆ, ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗದ ಕೊರತೆಯಿಂದ ಅಕ್ಕಪಕ್ಕದ ಜಮೀನು ಖರೀದಿಗೆ ನಿರ್ಧರಿಸಲಾಗಿತ್ತು.

ನಂತರ ಕಾಮಗಾರಿ ಪ್ರಾರಂಭವಾಗಿ ವಿಮಾನ ಏರಲು ಹಾಗೂ ಇಳಿಯಲು ಚಿಕ್ಕ ರನ್‌ವೇ ನಿರ್ಮಿಸಲಾಗಿತ್ತು. ಕಾರ್ಮಿಕರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಅಲ್ಲೊಂದು ಶೆಡ್‌ ಕೂಡ ನಿರ್ಮಾಣ ಮಾಡಲಾಗಿತ್ತು. ಮಿನಿ ವಿಮಾನ ನಿಲ್ದಾಣಕ್ಕೆ ಚಿಕ್ಕ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ನಂತರ ಬಂದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು ಕೂಡ ಸರ್ಕಾರದ ನಿರ್ಲಕ್ಷ್ಯದಿಂದ ಲೋಹದ ಹಕ್ಕಿಗಳು ಸದ್ದು ಮಾಡಬೇಕಾದ ಜಾಗದಲ್ಲಿ ಮೌನ ಆವರಿಸಿದೆ.

ಮಿನಿ ವಿಮಾನ ನಿಲ್ಲಬೇಕಾದ ರನ್‌ವೇನಲ್ಲಿ ಗಿಡಗಂಟಿಗಳು ತುಂಬಿವೆ. ರನ್‌ವೇ ಮಧ್ಯದಲ್ಲಿ ದೊಡ್ಡ ಗಿಡವೊಂದು ಸಂಪಾಗಿ ಬೆಳೆದಿದ್ದು, ಮೋಜು ಮಸ್ತಿಯ ಅಡ್ಡವಾಗಿ ಮಾರ್ಪಟ್ಟಿದೆ. ಸುತ್ತಲು ಹೊಲಗದ್ದೆಗಳಿದ್ದು, ಮದ್ಯ ವ್ಯಸನಿಗಳಿಗೆ ಅನುಕೂಲವಾಗಿದೆ. ಸುತ್ತಲು ಜಾಗ ಮದ್ಯದ ಬಾಟಲಿಗಳಿಂದ ತುಂಬಿದೆ. ಸಿಗರೇಟ್‌ ಪ್ಯಾಕ್‌, ನೀರಿನ ಬಾಟಲಿ, ಪ್ಲಾಸ್ಟಿಕ್‌ ಲೋಟ, ಇನ್ನೂ ಸ್ವಲ್ಪ ಮುಂದೆ ಹೋದರೆ ಕುಡಿದ ಬಾಟಲಿಗಳನ್ನು ಒಡೆದು ಹಾಕಲಾಗಿದೆ. ಶೆಡ್‌ ಸಂಪೂರ್ಣ ಹಾಳಾಗಿದ್ದು, ಶೆಡ್‌ ಸೀಟ್‌ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಮತ್ತು ವಾಣಿಜ್ಯೋದ್ಯಮ ಬೆಳವಣಿಗೆ ಉದ್ದೇಶದ ಮಿನಿ ವಿಮಾನ ನಿಲ್ದಾಣ ಜಾಗ ಮೋಜು-ಮಸ್ತಿಯ ಅಡ್ಡವಾಗಿದ್ದು, ಇದನ್ನು ಜಿಲ್ಲಾಡಳಿತ ತಪ್ಪಿಸಬೇಕು ಹಾಗೂ ಮಿನಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ಅಗತ್ಯ
ಜಿಲ್ಲೆಯಲ್ಲಿ ಎತ್ತರದ ಗಿರಿಶಿಖರ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಕೆಮ್ಮಣ್ಣುಗುಂಡಿ ಕೃಷ್ಣರಾಜೇಂದ್ರ ಗಿರಿಧಾಮ, ಹೆಬ್ಬೆ, ಮಲಯ ಮಾರುತ, ಮುತ್ತೋಡಿ, ಶೃಂಗೇರಿ, ಕಳಸ, ಹೊರನಾಡು ಶ್ರೀ ರಂಭಾಪುರಿ ಪೀಠ ಸೇರಿದಂತೆ ಅಯ್ಯನಕೆರೆ, ಮದಗದಕೆರೆ ವೀಕ್ಷಣೆಗೆ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

Advertisement

ತಾತ್ಕಾಲಿಕ ಬೇಲಿ ನಿರ್ಮಾಣ ಮಾಡಲಿ
ಮಿನಿ ವಿಮಾನ ನಿಲ್ದಾಣಕ್ಕೆ ಹೋಗುವ ಕಿರಿದಾದ ದಾರಿ ಪಕ್ಕದ ಜಮೀನು ನಿವೃತ್ತ ಸೈನಿಕರಿಗೆ ಸೇರಿದ್ದು, ಕಬ್ಬು ಬೆಳೆದಿದ್ದಾರೆ. ಜಮೀನು ದಾಟಿ ಮುಂದೆ ಹೋದರೆ ಮಿನಿ ವಿಮಾನ ನಿಲ್ದಾಣ. ಮಿನಿ ವಿಮಾನ ನಿಲ್ದಾಣಕ್ಕೆ ಸೇರಿದ ಜಾಗ ಮೋಜು-ಮಸ್ತಿ ಅಡ್ಡವಾಗಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ತಾತ್ಕಾಲಿಕ ಬೇಲಿ ನಿರ್ಮಾಣಕ್ಕಾದರೂ ಮುಂದಾಗಬೇಕು. ಶೆಡ್‌ ಸಂಪೂರ್ಣ ಹಾಳಾಗಿದೆ. ಸಿಮೆಂಟ್‌ ಶೀಟ್‌ಗಳನ್ನು ಕದ್ದೊಯ್ಯಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರೊಬ್ಬರು ಹೇಳಿದರು.

ಸಂದೀಪ್‌ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next