Advertisement

ಕಾನೂನು ಸೇವಾ ಪ್ರಾಧಿಕಾರದ ಸದ್ಬಳಕೆ ಅಗತ್ಯ

03:21 PM Feb 07, 2020 | Naveen |

ಚಿಕ್ಕಮಗಳೂರು: ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ತಿಳಿವಳಿಕೆ ಹಾಗೂ ನೆರವು ನೀಡುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ಕಾನೂನು ಸೇವೆಗಳ ಪ್ರಾಧಿಕಾರವಿದೆ. ಎಲ್ಲರೂ ಅದರ ಸದುಪಯೋಗ ಮಾಡಿಕೊಳ್ಳಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ ಹೇಳಿದರು.

Advertisement

ನಗರದ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಬ್‌ಸೆಟ್‌ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಯಾವೊಬ್ಬ ವ್ಯಕ್ತಿಯೂ ಆರ್ಥಿಕವಾಗಿ ದುರ್ಬಲನಾದಾಗ ಶೋಷಣೆಗೆ ಒಳಗಾಗುವುದು ಸಾಮಾನ್ಯ. ಆದ್ದರಿಂದ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವ ಯೋಜನೆ ರೂಪಿಸಿಕೊಳ್ಳಬೇಕು. ಸಮಾನತೆ, ಸಹಬಾಳ್ವೆಯಿಂದ ಬದುಕಲು ಕಾನೂನು ತಿಳಿವಳಿಕೆಯೂ ಬೇಕು ಎಂದರು.

ಕಾನೂನು ಸರ್ವವ್ಯಾಪಿ ಸಂಗತಿಯಾಗಿದ್ದು, ಧರ್ಮ ಇರುವ ಜಾಗದಲ್ಲಿ ಕಾನೂನು ನಿಯಮಗಳಿಗೆ ಮಾನ್ಯತೆ ದೊರಕಿದೆ. ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವಂತೆ ಕಾನೂನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ, ಆದರ್ಶವಿಲ್ಲದೇ ಯಾವುದೇ ಸಾಧನೆ ಮಾಡದೇ ಸಾವನ್ನಪ್ಪಿದರೆ ಅದು ಅವಮಾನ. ಉನ್ನತ ಗುರಿಯನ್ನಿಟ್ಟುಕೊಂಡು ಸತತ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನವರ ವಚನಗಳಲ್ಲಿ ಕಾನೂನುಗಳ ಉಲ್ಲೇಖವಿದೆ. ಕಳ್ಳತನ ಮಾಡುವುದು, ಸುಳ್ಳು, ಮೋಸ, ವಂಚನೆ ಕಾನೂನಿನಡಿ ಅಪರಾಧ. ಅವುಗಳನ್ನು ಮಾಡದೇ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು. ನಕಾರಾತ್ಮಕ ಚಿಂತನೆಗಳು, ಕೀಳರಿಮೆ ಮನೋಭಾವ ಬಿಟ್ಟು ದೃಢ ವಿಶ್ವಾಸದಿಂದ ಗುರಿಯೆಡೆಗೆ ತಲುಪಬೇಕು ಎಂದು ಹೇಳಿದರು.

Advertisement

ಜಿಲ್ಲಾ ವಕೀಲರ ಸಂಘದ ಖಜಾಂಚಿ ಕೆ.ಸುರೇಶ್‌ ಮಾತನಾಡಿ, ಶಿಬಿರಾರ್ಥಿಗಳು ಆರ್ಥಿಕವಾಗಿ ಸಬಲರಾಗಬೇಕು. ಬ್ಯಾಂಕು, ಸಂಘ-ಸಂಸ್ಥೆಗಳಲ್ಲಿ ಸಾಲ ಪಡೆಯುವಾಗ ಕೆಲವೊಂದು ನಿಯಮಗಳಿರುತ್ತವೆ. ಅವುಗಳ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ಮನುಷ್ಯನಲ್ಲಿ ಮಾನವೀಯತೆ ಮರೆಯಾದಾಗ ಅಪರಾಧಗಳು ನಡೆಯುತ್ತವೆ.

ಅಪರಾಧಗಳಾಗುವುದನ್ನು ತಪ್ಪಿಸಲು ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾಬ್‌ಸೆಟ್‌ ಸಂಸ್ಥೆಯ ನಿರ್ದೇಶಕ ರಮೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೆ ಸರ್ಕಾರಿ ಕೆಲಸ ಸಿಗುವುದು ಕಷ್ಟಸಾಧ್ಯ. ಹಾಗಾಗಿ ಸರ್ಕಾರಿ ನೌಕರಿ ಸಿಗಲಿಲ್ಲವೆಂದು ಯಾರು ಧೃತಿಗೆಡಬಾರದು. ದೃಢ ಮನಸ್ಸಿನಿಂದ ಸ್ವ-ಉದ್ಯೋಗ ಕೈಗೊಂಡು ದೊಡ್ಡ ಸಾಧನೆ ಮಾಡಬೇಕೆಂದು ಹೇಳಿದರು.

ಕೈಗಾರಿಕಾ ತರಬೇತಿ ಕೆಂದ್ರದ ನಿವೃತ್ತ ಉಪನಿರ್ದೇಶಕ ರಿಯಾಜ್‌ ಅಹಮ್ಮದ್‌ ಎನ್‌ಎಎಲ್‌ಎಸ್‌ಎ(ಬಡತನ ನಿವಾರಣೆ) ಯೋಜನೆ ಕುರಿತು ಮತ್ತು ವಕೀಲ ಹಾಗೂ ಬಾಲ ನ್ಯಾಯ ಮಂಡಳಿ ಸದಸ್ಯಎಚ್‌.ಸಿ.ನಟರಾಜ್‌ ಮಕ್ಕಳ ಕಲ್ಯಾಣ ಮತ್ತು ಬಾಲ ನ್ಯಾಯ ಮಂಡಳಿಯಲ್ಲಿನ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಸ್‌. ಶಿವಕುಮಾರ್‌, ವಕೀಲ ರುದ್ರಪ್ಪ, ಉಪನ್ಯಾಸಕ ರವಿಚಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next