Advertisement

ನೂರಾರು ಬಿಲ್ವ ಪತ್ರೆ ಮರಗಳ ಪವಿತ್ರ ತಾಣ

12:53 PM Feb 21, 2020 | Naveen |

ಚಿಕ್ಕಮಗಳೂರು: ಶಿವನಿಗೆ ಅತ್ಯಂತ ಶ್ರೇಷ್ಠವಾದದ್ದು ಬಿಲ್ವಪತ್ರೆ ಪೂಜೆ. ಬಿಲ್ವಪತ್ರೆಯಿಂದ ಪೂಜಿಸಬೇಕೆನ್ನುವುದು ಶಿವಭಕ್ತರ ಆಸೆ. ಆದರೆ, ಬಿಲ್ವಪತ್ರೆ ಸಿಗುವುದು ಮಾತ್ರ ಅತೀ ವಿರಳ. ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಕಲ್ಮರುಡೇಶ್ವರ ಮಠದ ಆವರಣದಲ್ಲಿ ನೂರಾರು ಬಿಲ್ವಪತ್ರೆ ಮರಗಳಿಂದ ತುಂಬಿ ತುಳುಕುತ್ತಿದ್ದು, ಶಿವಭಕ್ತರಲ್ಲಿ ಆಶ್ವರ್ಯವನ್ನುಂಟು ಮಾಡಿದೆ.

Advertisement

ಕಡೂರು ತಾಲೂಕಿನ ಸಖರಾಯಪಟ್ಟಣಕ್ಕೆ ಹೊಂದಿಕೊಂಡಿರುವ ಕಲ್ಮುರುಡೇಶ್ವರ ಸ್ವಾಮಿ ಮಠದ ಆವರಣದಲ್ಲಿ ಒಂದಲ್ಲ, ಎರಡಲ್ಲ, ನೂರಾರು ಬಿಲ್ವಪತ್ರೆ ಮರಗಳಿವೆ. ದೇಶದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಬಿಲ್ವಪತ್ರೆ ವನದ ಸೊಬಗು ಸವಿಯಲು ರಾಜ್ಯದ ಮೂಲೆ-ಮೂಲೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸ್ತಾರೆ. ಮಠಕ್ಕೆ ಆಗಮಿಸುವ ನೂರಾರು ಭಕ್ತರು ತಣ್ಣೀರು ಸ್ನಾನ ಮಾಡಿ, ಬಿಲ್ವಪತ್ರೆ ಎಲೆ ಕೊಯ್ದು ಭಕ್ತಿಯಿಂದ ಇಲ್ಲಿನ ಕಲ್ಮರುಡೇಶ್ವರನಿಗೆ ಅರ್ಪಿಸಿ ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಭಕ್ತರದ್ದು.

ಇತಿಹಾಸ ಪ್ರಸಿದ್ಧ ಮಠದ ಆವರಣದಲ್ಲಿ ಇಷ್ಟೊಂದು ಬಿಲ್ವಪತ್ರೆ ಸಸಿಗಳನ್ನು ಯಾರೂ ನೆಟ್ಟಿದ್ದಲ್ಲ. ಮರುಳಸಿದ್ದೇಶ್ವರನೆಂಬ ಸನ್ಯಾಸಿ ತಪಸ್ಸು ಮಾಡಿರುವ ಪುಣ್ಯಕ್ಷೇತ್ರ ಇದಾಗಿದ್ದು, ಕೈಯಲ್ಲಿದ್ದ ಕುಂಡಲಿಯ ತೀರ್ಥವನ್ನು ಸುತ್ತಮುತ್ತ ಚಲ್ಲಿದ್ದರಿಂದ ಈ ಪ್ರದೇಶದಲ್ಲಿ ಅಪಾರ ಸಂಖ್ಯೆಯ ಬಿಲ್ವಪತ್ರೆ ಮರಗಳು ಬೆಳೆದಿವೆ. ಮರಗಳನ್ನು ಯಾರೂ ಬೆಳೆಸಿಲ್ಲ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಎಂದು ಸ್ಥಳೀಯರು ಪುರಾಣದ ಹತ್ತಾರು ಕಥೆಗಳನ್ನು ಹೇಳುತ್ತಾರೆ. ಇಲ್ಲಿ ನೆಲೆಸಿರುವ ದೇವರನ್ನು ಭಕ್ತರು ಅಜ್ಜಯ್ಯ ಎಂದು ಕರೆಯುತ್ತಾರೆ. ಬೇಡಿದ ಭಕ್ತರಿಗೆ ತಮ್ಮ ಇಷ್ಟರ್ಥಗಳನ್ನು ಅಜ್ಜಯ್ಯ ಸಿದ್ಧಿಸುತ್ತಾರೆ ಎನ್ನುವುದು ಭಕ್ತರ ನಂಬಿಕೆ ಹಾಗೂ ಸುತ್ತಲ ಬೆಳೆದಿರುವ ಬಿಲ್ವಪತ್ರೆ ಮರಗಳು ಎಲ್ಲಾ ಕಾಲದಲ್ಲೂ ಕೂಡ ಹಸಿರಿನಿಂದ ಕಂಗೊಳಿಸುತ್ತವೆ. ಒಂದು ವೇಳೆ ಮರಗಳು ಬಾಡಿದರೆ ಮುಂದೆ ಏನೋ ಅಪತ್ತು ಕಾದಿದೆ ಎಂಬ ಸೂಚನೆ ಎಂಬುದು ಭಕ್ತರ ನಂಬಿಗೆ.

ಇತ್ತೀಚಿನ ದಿನಗಳಲ್ಲಿ ಅತ್ಯಂತ ವಿರಳವಾಗಿರುವ ಬಿಲ್ವಪತ್ರೆಯ ಒಂದು ಮರ ಕಂಡರೆ ಶಿವಭಕ್ತರು ಧನ್ಯರಾಗುತ್ತಾರೆ. ಆದರೆ, ಈ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರೆ ಯಾವ ಮರಗಿಡಗಳಿಲ್ಲ. ಸುಮಾರು 2 ಎಕರೆ ಪ್ರದೇಶದಲ್ಲಿ ಎಗ್ಗಿಲ್ಲದ ಬೆಳೆದಿರುವ ಈ ಮರಗಳು ಭಕ್ತರ ಪಾಲಿಗೆ ಸಾಕ್ಷಾತ್‌ ಶಿವನ ಪವಾಡವೇ ಎನಿಸುತ್ತದೆ. ಅತ್ಯಂತ ಅಪರೂಪವಾಗಿರುವ ಬಿಲ್ವಪತ್ರೆ
ವನ ಸೂಕ್ತ ನಿರ್ವಹಣೆ ಇಲ್ಲದೇ ಸ್ವಲ್ಪ ಮಟ್ಟಿಗೆ ಸೊರಗಿದೆ.

ಸ್ಥಳೀಯ ದಾನಿಯೊಬ್ಬರ ಸಹಾಯದಿಂದ ಮಠ ನಡೆಸಲಾಗುತ್ತಿದೆ. ಮಠಕ್ಕಿರುವ ಅಲ್ಪ ಅದಾಯದಿಂದ ಈ ವನದ ರಕ್ಷಣೆ ಮಾಡಲಾಗುತ್ತಿದೆ. ರಾಜ್ಯದ ಬೇರೆಲ್ಲೂ ಸಿಗದ ಈ ಅಪರೂಪದ ಸಸ್ಯ ಸಂಪತ್ತಿನ ರಕ್ಷಣೆಗೆ ಸರ್ಕಾರ ಮುಂದಾಗಲಿ ಎನ್ನುವುದು ಸ್ಥಳೀಯರ ಆಶಯವಾಗಿದೆ .

Advertisement

ಕಲ್ಮುರುಡೇಶ್ವರ ಸ್ವಾಮಿ ಮಠ ಅಜ್ಜಯ್ಯಮಠ ಎಂದು ಪ್ರಸಿದ್ಧಿ ಪಡೆದಿದೆ. ನಾನು ಕಳೆದ 15ವರ್ಷಗಳಿಂದ ನಡೆದುಕೊಳ್ಳುತ್ತಿದ್ದೇನೆ. ಅಜ್ಜಯ್ಯ ನಂಬಿದವರನ್ನು ಎಂದೂ ಕೈಬಿಡಲ್ಲ. ಎಲ್ಲೂ ಕೂಡ ಇಷ್ಟೊಂದು ಬಿಲ್ವಪತ್ರೆ ಮರಗಳಿರುವುದನ್ನು ನೋಡಿಲ್ಲ. ದೇವರ ಪವಾಡದಿಂದ ಬಿಲ್ವಪತ್ರೆ ಮರಗಳಿವೆ. ನೂರಾರು ವರ್ಷಗಳಿಂದ ಈ ಮರಗಳು ಇವೆ ಎಂದು ಹೇಳಲಾಗುತ್ತದೆ.
 ಯೋಗೀಶ್‌, ಭಕ್ತ

ಪುಣ್ಯಕ್ಷೇತ್ರಕ್ಕೆ ಸುಮಾರು 500-600 ವರ್ಷಗಳ ಇತಿಹಾಸವಿದೆ. ಗುರುಗಳು ಐಕ್ಯವಾದ ಸ್ಥಳವೆಂಬ ಪ್ರತೀತಿ ಇದೆ. ರಾಜ್ಯದ ಅನೇಕ ಭಾಗದಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಸನ್ಯಾಸಿಯೊಬ್ಬರು ತಪಸ್ಸು ಮಾಡುವಾಗ ಚಲ್ಲಿದ ತೀರ್ಥದಿಂದ ಇಷ್ಟೊಂದು ಬಿಲ್ವಪತ್ರೆ ಮರಗಳು ಬೆಳೆದಿವೆ ಎಂದು ಪೂರ್ವಜರು ಹೇಳುತ್ತಾರೆ.
ರಂಗನಾಥ್‌,
 ಸಖರಾಯಪಟ್ಟಣ

ಭಕ್ತಿಯಿಂದ ಬೇಡಿಕೊಂಡು ಹರಕೆ ಕಟ್ಟಿಕೊಂಡರೆ ಇಷ್ಟರ್ಥಗಳು ಸಿದ್ಧಿಸುತ್ತವೆ. ಒಂದೇ ಸ್ಥಳದಲ್ಲಿ ಇಷ್ಟೊಂದು ಬಿಲ್ವಪತ್ರೆ ಮರಗಳಿರುವುದು ದೇವರ ಪಾವಡ.
ಗಿರಿಜಮ್ಮ,
 ಸ್ಥಳೀಯರು

ಸಂದೀಪ್‌ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next