ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಶನಿವಾರ ಬೆಳಗಿನಿಂದಲೂ ಮೂಡಿಗೆರೆ ತಾಲೂಕಿನ ಕಳಸ, ಕೊಟ್ಟಿಗೆಹಾರ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ.
ಉಳಿದೆಡೆ ಮಳೆ ಸ್ವಲ್ಪ ಕಡಿಮೆಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮಳೆಯೊಂದಿಗೆ ಭಾರೀ ಗಾಳಿಯೂ ಬೀಸಿದ್ದರಿಂದಾಗಿ ಮತಿಘಟ್ಟ ಗ್ರಾಮದ ಮಾರ್ಟಿನ್ ಎಸ್ಟೇಟ್‌ನಲ್ಲಿ ಮನೆ ಮೇಲೆ ಮರವೊಂದು ಬಿದ್ದು, ಮನೆಯೊಳಗಿದ್ದ ಅಸ್ಸಾಂ ಮೂಲದ ಎಂಟು ಜನ ಕೂಲಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೊಟ್ಟಿಗೆಹಾರದ ಸುತ್ತಲ ಪ್ರದೇಶಗಳಲ್ಲಿ ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿರುವುದರಿಂದಾಗಿ ಹಲವೆಡೆ ಮರಗಳು ಬಿದ್ದಿರುವ ವರದಿಯಾಗಿದೆ. ನರಸಿಂಹರಾಜಪುರ ತಾಲೂಕಿನಲ್ಲೂ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಪಟ್ಟಣದ ಪ್ರವಾಸಿ ಮಂದಿರದ ಬಳಿ ಶನಾವಾಜ್ ಬಾನು ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಉಳಿದಂತೆ ಶೃಂಗೇರಿ ತಾಲೂಕಿನಲ್ಲಿ ಶನಿವಾರ ಬೆಳಗಿನಿಂದಲೂ ಸೋನೆ ಮಳೆಯಾಗುತ್ತಿದೆ. ಕಳೆದ 2-3 ದಿನಗಳಿಂದ ಬೀಸುತ್ತಿದ್ದ ಬಿರುಗಾಳಿ ಕಡಿಮೆಯಾಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಕೊಪ್ಪ ತಾಲೂಕಿನಲ್ಲಿಯೂ ಶನಿವಾರ ಮಳೆ ಕಡಿಮೆಯಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಲ ಪ್ರದೇಶಗಳಲ್ಲಿಯೂ ಶನಿವಾರ ಆಗಾಗ ಸ್ವಲ್ಪ ಮಳೆಯಾಗುತ್ತಿತ್ತು.