Advertisement

ಜಿಲ್ಲಾ ಉತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ

05:55 PM Feb 27, 2020 | Naveen |

ಚಿಕ್ಕಮಗಳೂರು: ಫೆ.28ರಿಂದ ಮೂರು ದಿನಗಳ ಕಾಲ ನಡೆಯುವ ಜಿಲ್ಲಾ ಉತ್ಸವದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಕರೆ ನೀಡಿದರು.

Advertisement

ಬುಧವಾರ ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ಆವರಣದಲ್ಲಿ ಪ್ರಚಾರ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲಾ ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ಆಯೋಜಿಸಿದ್ದ ವಿವಿಧ ಗ್ರಾಮೀಣ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಚಟುವಟಿಕೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಫೆ.28 ರಿಂದ ಮಾ.1 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನ ಹಾಗೂ ಕುವೆಂಪು ಕಲಾಮಂದಿರದಲ್ಲಿ ನಡೆಯಲಿವೆ.

ಕಾರ್ಯಕ್ರಮಗಳಿಗೆ ಜಿಲ್ಲೆಯ ಕಲಾಸಕ್ತರು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸುವಂತೆ ತಿಳಿಸಿದರು. ಜನಸಾಮಾನ್ಯರು, ವಿದ್ಯಾರ್ಥಿಗಳು, ಹಾಗೂ ಪೋಷಕರಿಗೆ ಜಿಲ್ಲಾ ಉತ್ಸವದ ಕುರಿತು ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಪ್ರಚಾರ ಸಮಿತಿ ವತಿಯಿಂದ ಪ್ರಚಾರ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.

ಜಾಥಾವನ್ನು ನಡೆಸಲು ಎರಡು ತಂಡಗಳಾಗಿ ರೂಪಿಸಿದ್ದು, ಒಂದು ತಂಡ ಡಿಎಸಿಜಿ ಪಾಲಿಟೆಕ್ನಿಕ್‌ ಆವರಣದಿಂದ ರತ್ನಗಿರಿ ರಸ್ತೆ, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಐ.ಜಿ. ರಸ್ತೆ ಹಾಗೂ ತೊಗರಿ ಹಂಕಲ್‌ ಸರ್ಕಲ್‌ ಬಳಸಿ ನಾಯ್ಡುಬೀದಿ, ಆಜಾದ್‌ ಪಾರ್ಕ್‌ ವೃತ್ತದ ಮೂಲಕ ನಗರ ಸಭೆ ತಲುಪಲಿದೆ. ಮತ್ತೂಂದು ಜಾಥಾ ತಂಡ ಕೆಇಬಿ ಕಚೇರಿ, ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ ಹಾಗೂ ಎಂಜಿ ರಸ್ತೆ, ಆಜಾದ್‌ ಪಾರ್ಕ್‌ ಮೂಲಕ ನಗರ ಸಭೆ ಆವರಣ ತಲುಪಲಿದೆ ಎಂದು ತಿಳಿಸಿದರು.

ಫೆ.28 ರಂದು ಕುವೆಂಪು ಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ನಾಟಕೋತ್ಸವ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ 120ಕ್ಕೂ ಹೆಚ್ಚು ಕಲಾತಂಡಗಳ 3 ಸಾವಿರ ಕಲಾವಿದರಿಂದ ಹಾಗೂ ಎರಡು ಸಾವಿರ ವಿದ್ಯಾರ್ಥಿಗಳಿಂದ ಬೃಹತ್‌ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಸಂಜೆ ಜಿಲ್ಲಾ ಆಟದ ಮೈದಾನದ ಮುಖ್ಯ ವೇದಿಕೆಯಲ್ಲಿ ಜಾನಪದ ಜಾತ್ರೆ ನಡೆಯಲಿದೆ ಎಂದರು.

Advertisement

ಫೆ.29 ರಂದು ಕುವೆಂಪು ಕಲಾ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ನೃತ್ಯೋತ್ಸವ ಕಾರ್ಯಕ್ರಮ ಹಾಗೂ ಸಂಜೆ 6 ಗಂಟೆಗೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದ ಮುಖ್ಯ ವೇದಿಕೆಯಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮಾ.1 ರಂದು ಕುವೆಂಪು ಕಲಾಮಂದಿರದಲ್ಲಿ ಬೆಳಗ್ಗೆ 9 ರಿಂದ ಶಾಸ್ತ್ರೀಯ ಸಂಗೀತೋತ್ಸವ ಹಾಗೂ ಮಧ್ಯಾಹ್ನ 3 ರಿಂದ ಸುಗಮ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.30 ರಿಂದ ಜಿಲ್ಲಾ ಆಟದ ಮೈದಾನದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ 500 ವಿದ್ಯಾರ್ಥಿಗಳಿಂದ ಆಳ್ವಾಸ್‌ ನುಡಿಸಿರಿ ವಿರಾಸತ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಉತ್ಸವವನ್ನು ಮೆರಗುಗೊಳಿಸುವ ಉದ್ದೇಶದಿಂದ 3 ದಿನಗಳ ಕಾಲ ಚಿತ್ರಕಲಾ ಪ್ರದರ್ಶನ, ಬೃಹತ್‌ ಆಹಾರ ಮೇಳ, ವಸ್ತು ಪ್ರದರ್ಶನ ಹಾಗೂ ಹೆಲಿಟೂರಿಸಂ, ಉಚಿತ ಸಿನಿಮೋತ್ಸವ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸುವಂತೆ ಕೇಳಿಕೊಂಡರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿ ಶೃತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ಪ್ರಚಾರ ಸಮಿತಿ ಸದಸ್ಯರು, ರಂಗನಾಥ ಪ್ಯಾರಾ ಮೆಡಿಕಲ್‌ ಕಾಲೇಜು, ಹೋಲಿಕ್ರಾಸ್‌ ಪ್ಯಾರಾ ಮೆಡಿಕಲ್‌ ಕಾಲೇಜು, ಸಹ್ಯಾದ್ರಿ ಪ್ಯಾರಾಮೆಡಿಕಲ್‌ ಕಾಲೇಜು, ರಾಮಕೃಷ್ಣ ನರ್ಸಿಂಗ್‌ ಹಾಗೂ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next