ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿರುವ ಲಂಬಾಣಿ ತಾಂಡಗಳಿಗೆ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬೇಕೆಂಬ ಬೇಡಿಕೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಕೈಗೊಂಡಿದ್ದು, ಶೀಘ್ರದಲ್ಲೇ ತಾಲೂಕಿನ 48 ಲಂಬಾಣಿ ತಾಂಡಗಳಿಗೆ ಕಂದಾಯ ಗ್ರಾಮ ಮಾನ್ಯತೆ ದೊರೆಯಲಿದೆ. ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕಲ್ಲದೆ, ತನ್ನ ಮೂಲ ಸಂಪ್ರದಾಯಗಳ ಪರಿಪಾಲನೆಗೆ ಆದ್ಯತೆ ನೀಡಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ 281ನೇ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ನಗರದ ಶ್ರೀಚಳ್ಳಕೆರೆಯಮ್ಮ ದೇವಸ್ಥಾನದ ಬಳಿ ಸಮುದಾಯದ ಬೃಹತ್ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಂಜಾರ ಸಮುದಾಯ ಕಳೆದ ಹಲವಾರು ದಶಕಗಳಿಂದ ರಾಜಕೀಯ ಕ್ಷೇತ್ರವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿದ್ಯ ದೊರೆಯದೇ ಹಿನ್ನೆಡೆ ಅನುಭವಿಸುತ್ತಿದ್ದು, ತಾವೆಲ್ಲರೂ ಹೆಚ್ಚು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಚಳ್ಳಕೆರೆ ನಗರದಲ್ಲಿ ಸೇವಾಲಾಲ್ ವೃತ್ತ ಬಗ್ಗೆ ಬೇಡಿಕೆ ಇದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿ ಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಮತ್ತೂಮ್ಮೆ ಈ ಕ್ಷೇತ್ರದ ಶಾಸಕನಾಗಿ ಎರಡನೇ ಬಾರಿಗೆ ಆಯ್ಕೆಯಾಗಲು ಲಂಬಾಣಿ ಸಮುದಾಯವೂ ಪ್ರಮುಖ ಕಾರಣವಾಗಿದೆ. ಸದಾಕಾಲ ನಿಮ್ಮೊಡನೆ ಇದ್ದು, ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರ ನೀಡಲು ನಾನು ಬದ್ಧ ಎಂದರು.
ಗಾಯಕ ಹನುಮಂತ ಮಾತನಾಡಿ, ನಾನು ನನ್ನ ಮೂಲ ವೃತ್ತಿಯಲ್ಲಿ ನಿರತನಾಗಿದ್ದಾಗ ಆಕಸ್ಮಿಕವಾಗಿ ಸ್ನೇಹಿತರಿಂದ ಸರಿಗಮಪ ಕಾರ್ಯಕ್ರಮಕ್ಕೆ ಸೇರ್ಪಡೆಯಾದೆ. ಸಾಮಾನ್ಯ ಕಾಯಕನಾಗಿ ಪ್ರವೇಶ ಪಡೆದ ನಾನು ಕರ್ನಾಟಕದ ಸಮಸ್ತ ಅಭಿಮಾನಿಗಳ ಶುಭ ಹಾರೈಕೆಯಿಂದ ಎತ್ತರಕ್ಕೆ ಬೆಳೆದಿದ್ದೇನೆ. ನನ್ನನ್ನು ಬೆಳೆಸಿದ ಎಲ್ಲರಿಗೂ ಧನ್ಯವಾದ ಎಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಸಂತ ಸೇವಾಲಾಲ್ ಈ ಸಮುದಾಯಕ್ಕೆ ಶಕ್ತಿ ಮತ್ತು ಚೈತನ್ಯವನ್ನು ತುಂಬಿದ ಮಹಾ ಪುರುಷ. 17ನೇ ಶತಮಾನದಲ್ಲಿಯೇ ಇವರ ಸಾಮಾಜಿಕ ಜಾಗೃತಿಯನ್ನು ಗುರುತಿಸಿ ಅವರ ಆದರ್ಶಗಳು ಎಂದಿಗೂ ಮರೆಯಾಗದಂತೆ ಸರ್ಕಾರ ಈ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ರೂಪಿಸಿದೆ ಎಂದರು.
ಶಿಕ್ಷಕ ಎಸ್.ರಾಜಣ್ಣ ಉಪನ್ಯಾಸ ನೀಡಿದರು. ಶಾಸಕ ಟಿ.ರಘುಮೂರ್ತಿ ಅವರಿಗೆ ಮನವಿ ಮಾಡಿದ ಮಕ್ಕಳ ತಜ್ಞ, ತಾಲೂಕು ಬಂಜಾರ ನೌಕರರ ಸಂಘದ ಗೌರವ ಸಲಹೆಗಾರ ಡಾ.ಬಿ.ಚಂದ್ರನಾಯ್ಕ ಗ್ರಾಮೀಣ ಭಾಗಗಳ ತಾಂಡಗಳಲ್ಲಿ ಮೂಲ ಸಮಸ್ಯೆಗಳ ಕೊರತೆ ಇದೆ. ಸಮುದಾಯದಲ್ಲಿ ಶಿಕ್ಷಣ ಕೊರತೆಯಿಂದಾಗಿ ಜಾಗೃತಿಯಾಗಲು ಸಾಧ್ಯವಾಗಿಲ್ಲ. ಶಾಸಕರು ತಾಂಡಗಳಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಮನವಿ ಮಾಡಿದರು.
ಸಿಬಾರದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಕೆಂಗೇರಿಯ ರಾಜಯೋಗ ವಿದ್ಯಾಶ್ರಮದ ಗೀತಸಾರ ದೇನಾಭಗತ್ ಸ್ವಾಮೀಜಿ, ಕುರುಡಿಹಳ್ಳಿಯ ಶಿವಸಾಧು ಸ್ವಾಮೀಜಿ ಮಾತನಾಡಿದರು. ಜಿಪಂ ಸದಸ್ಯರಾದ ಬಿ.ನಾಗೇಂದ್ರನಾಯ್ಕ, ಬಿ.ಪಿ.ಪ್ರಕಾಶ್ ಮೂರ್ತಿ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯ ವೀರೇಶ್, ಕಂದಿಕೆರೆ ಸುರೇಶ್‌ಬಾಬು, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ, ಸುಜಾತ, ಜಯಲಕ್ಷ್ಮೀ , ಬಿ.ಟಿ.ರಮೇಶ್‌ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಯಿ, ಗೌರವಾಧ್ಯಕ್ಷ ಗೋಪಾಲನಾಯ್ಕ, ಶಂಕರನಾಯ್ಕ, ಪಿ.ತಿಪ್ಪೇಸ್ವಾಮಿ, ಡಾ| ಸಂತೋಷ, ಪಿ.ಪಾಲಯ್ಯ, ವೆಂಕಟೇಶಪ್ಪ ಇದ್ದರು. ಎಲ್.ರಮೇಶ್‌ನಾಯ್ಕ ಸ್ವಾಗತಿಸಿದರು. ಬಿ.ಟಿ.ಯಂಕಾನಾಯ್ಕ ವಂದಿಸಿದರು. ಟಿ.ಚಂದ್ರನಾಯ್ಕ ನಿರೂಪಿಸಿದರು.