Advertisement

ಕಾಫಿ ನಾಡಿಗೆ ನಿರಾಶಾದಾಯಕ ಬಜೆಟ್‌

01:00 PM Feb 02, 2020 | Naveen |

ಚಿಕ್ಕಮಗಳೂರು: ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಜಿಲ್ಲೆಯ ಕಾಫಿ ಉದ್ಯಮದ ಏಳಿಗೆಗೆ ಕೇಂದ್ರ ಬಜೆಟ್‌ನಲ್ಲಿ ನೆರವಿನ ನಿರೀಕ್ಷೆಯಲ್ಲಿದ್ದ ಕಾಫಿ ಬೆಳೆಗಾರರಿಗೆ, ಶನಿವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಿಂದ ಭರವಸೆಯ ಆಶಾಗೋಪುರ ಕಳಚಿ ಬೀಳುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಕಾಫಿ ಉದ್ಯಮ ದೊಡ್ಡ ಉದ್ಯಮವಾಗಿದ್ದು, ಸಾವಿರಾರು ಕುಟುಂಬಗಳಿಗೆ ಅನ್ನ ನೀಡುತ್ತಿದೆ. ಆದರೆ, ಕಳೆದ ವರ್ಷದ ಆಗಸ್ಟ್‌, ಸೆಪ್ಪೆಂಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದ ನಷ್ಟವಾಗಿದೆ. ಮಲೆನಾಡು ಭಾಗದಲ್ಲಿ ನೂರಾರು ಎಕರೆ ಭೂ ಕುಸಿತದಿಂದ ಕಾಫಿ ಗಿಡಗಳು ಮಣ್ಣು ಪಾಲಾಗಿದೆ. ಬೆಳೆಯೂ ಇಲ್ಲದೆ, ಅತ್ತ ಬೆಲೆಯೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಬೆಳೆಗಾರರಿಗೆ ಕೇಂದ್ರ ಬಜೆಟ್‌ನಲ್ಲಿ ಕಾಫಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿ ಮರುಜನ್ಮ ನೀಡುವ ಭರವಸೆಯಿತ್ತು. ಆದರೆ, ಅದು ಹುಸಿಯಾಗಿದೆ.

ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತದಿಂದ ಕಾರ್ಮಿಕರ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಫಿ ಉದ್ಯಮ ಕಳೆದ ಹತ್ತು ವರ್ಷಗಳಿಂದ ನರಳುತ್ತಿದೆ. ಈ ಬಾರಿಯಾದರೂ ಒಳ್ಳೆಯ ಫಸಲು ಕೈಸೇರಬಹುದು ಎಂಬ ಆಸೆ ಇಟ್ಟುಕೊಂಡಿದ್ದ ಬೆಳೆಗಾರರ ಕನಸಿಗೆ ಅತಿವೃಷ್ಟಿ ತಣ್ಣೀರು ಎರಚಿದೆ. ಎಕರೆಗೆ ಮೂಟೆಗಟ್ಟಲೇ ಕಾಫಿ ಬೆಳೆಯುತ್ತಿದ್ದ ರೈತರಿಗೆ ಎಕರೆಗೆ ಒಂದೋ ಎರಡೋ ಮೂಟೆ ಕಾಫಿ ಸಿಗುತ್ತಿದೆ. ಬೆಲೆ ಕುಸಿತದಿಂದ 10 ರಿಂದ 15 ಸಾವಿರ ರೂ. ಎಕರೆಗೆ ಸಿಗುತ್ತಿದೆ. ಉತ್ಪಾದನಾ ವೆಚ್ಚ ಮಾತ್ರ ಎಕರೆಗೆ ಸುಮಾರು 50 ಸಾವಿರದ ವರೆಗೂ ಖರ್ಚಾಗುತ್ತಿದ್ದು, ಸಾಲದ ಸುಳಿಯಲ್ಲಿ ಬೆಳೆಗಾರರು ಸಿಲುಕಿದ್ದಾರೆ.

ಕಳೆದ 10 ವರ್ಷಗಳಿಂದ ಬೆಲೆಯಲ್ಲಿ ಏರಿಕೆ ಕಾಣದೇ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮರುಪಾವತಿ ಮಾಡಲಾಗದೆ ಅನೇಕ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ನಡೆದಿವೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡದಿರುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ಸಿಗದಂತಾಗಿದೆ. ಅನೇಕ ಬಾರೀ ಕಾಫಿ ಬೆಳೆಗಾರರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದಾರೆ. ಕೇಂದ್ರದ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಮಸ್ಯೆ ಪರಿಹರಿಸುವ ಭರವಸೆ ಸಿಕ್ಕಿದೆ ಹೊರತು, ಬೆಳೆಗಾರರ ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ಈ ಸಾಲಿನ ಬಜೆಟ್‌ನಲ್ಲಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ, ಕೇಂದ್ರ ಸರ್ಕಾರ ನೆರವಿಗೆ ನಿಲ್ಲಬಹುದೇನೋ ಎಂಬ ಕನಸು ಹೊತ್ತಿದ್ದ ರೈತರಿಗೆ ಶಾಕ್‌ ನೀಡಿದೆ.

ನಿರೀಕ್ಷೆ ಹುಸಿಗೊಳಿಸಿದ ಬಜೆಟ್‌: ಗಿರೀಶ್‌ ಚಿಕ್ಕಮಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2020ರ ಬಜೆಟ್‌ನಲ್ಲಿ ರೈತದ ಸಾಲಮನ್ನಾ ಆಗುವ ನಿರೀಕ್ಷೆ ದೇಶದ ಜನರಲ್ಲಿತ್ತು. ಅದು ಸಂಪೂರ್ಣ ಹುಸಿಯಾಗಿದ್ದು, ಇದೊಂದು ನಿರಾಶಾದಾಯಕ ಬಜೆಟ್‌ ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್‌ ಟೀಕಿಸಿದ್ದಾರೆ. ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸೇರಿದಂತೆ ದೇಶದಲ್ಲಿಕೋಟ್ಯಂತರ ನಿರುದ್ಯೋಗಿಗಳಿದ್ದಾರೆ. ಅವರಾರಿಗೂ ಉದ್ಯೋಗ ಸಿಗುವ ಯಾವ ಯೋಜನೆಗಳನ್ನೂ ಘೋಷಣೆ ಮಾಡಿಲ್ಲ, ಈ ಸಾಲಿನ ಬಜೆಟ್‌ ಬಂಡವಾಳಶಾಹಿಗಳು ಹಾಗೂ ಶೇರುದಾರರಿಗೆ ಹೆಚ್ಚು ಅನುಕೂಲವಾಗಿದೆ. ಕೈಗಾರಿಕೋದ್ಯಮಿಗಳ ಪರವಾಗಿದೆ.  ಗೃಹ ನಿರ್ಮಾಣ ಸೇರಿದಂತೆ ದಿನನಿತ್ಯ ಬಳಸುವ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಿರುವುದು ಸಾಮಾನ್ಯ ಜನರಿಗೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದ್ದಾರೆ.

Advertisement

ಕಾಫಿ ತೋಟಗಳಲ್ಲಿ ಸಿಗುವ ಕೆಲಸವನ್ನೇ ನಂಬಿಕೊಂಡು ಜಿವನ ಸಾಗಿಸುತ್ತಿದ್ದ ನಮಗೆ ಮಳೆಯಿಂದ ಕಾಫಿ ತೋಟಗಳು ಭಾಗಶಃ ಹಾಳಾಗಿವೆ. ಫಸಲು ಕಡಿಮೆ ಇದೆ. ಇದರಿಂದ ಕಾಫಿ ತೋಟದಲ್ಲಿ ಕೆಲಸ ಸಿಗದಂತಾಗಿದೆ. ಬೇರೆ ಕೆಲಸಕ್ಕೂ ಹೋಗಲಾರದೆ, ಇತ್ತ ಕಾಫಿ ತೋಟಗಳಲ್ಲಿ ಜೀವನ ನಿರ್ವಹಣೆಯಷ್ಟು ಕೆಲಸ ಸಿಗದೆ ಕಷ್ಟಕ್ಕೆ ಸಿಲುಕಿದ್ದೇವೆ.
ಮಂಜುಳಾ ನಾಗರಾಜ್‌,
ಕೂಲಿ ಕಾರ್ಮಿಕರು

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ರೈತರ ಭರವಸೆಗಳನ್ನು ಹುಸಿಗೊಳಿಸಿದೆ. ಬಜೆಟ್‌ನಲ್ಲಿ ನಮಗೂ ಒಂದಿಷ್ಟು ನೆರವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಕಾಫಿ, ಅಡಕೆ, ತೆಂಗು ಬೆಳೆಗಾರರಿಗೆ ನಿರಾಸೆಯಾಗಿದೆ. ಸಮಸ್ಯೆಯಲ್ಲಿರುವ ಕಾಫಿ ಬೆಳೆಗಾರರು ಹಾಗೂ ರೈತರ ಸಾಲಮನ್ನಾ ಮಾಡುತ್ತಾರೆಂದು ಅಂದುಕೊಂಡಿದ್ದೆವು ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಫಿ ಕ್ಲಸ್ಟರ್‌ ಮಾಡುವ ಭರವಸೆ ನೀಡಿದ್ದರು. ಅದರ ಬಗ್ಗೆಯೂ ಬಜೆಟ್‌ನಲ್ಲಿ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಈ ಬಜೆಟ್‌ನಿಂದ ರೈತರಿಗೆ ನಯಾಪೈಸ ಕೂಡ ಪ್ರಯೋಜನವಾಗಿಲ್ಲ. ದೊಡ್ಡ ಪ್ರಮಾಣದ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾದ ರಾಜ್ಯದ ಜನತೆಗೆ ಏನೇನೂ ಅನುಕೂಲವಾಗಿಲ್ಲ.
ಎಚ್‌. ಎಚ್‌.ದೇವರಾಜ್‌,
ಕಾಫಿ ಬೆಳೆಗಾರರು-ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರು

ಸಾಮಾನ್ಯ ವರ್ಗದವರಿಗೆ ತೆರಿಗೆ ವಿನಾಯಿತಿಯನ್ನು 5 ಲಕ್ಷ ರೂ.ಗೆ ಏರಿಸಿರುವುದು ಅನುಕೂಲವಾಗಿದೆ. ಠೇವಣಿ ಮೇಲೆ ವಿಮೆಯನ್ನು 5 ಲಕ್ಷದವರೆಗೂ ಏರಿಕೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಕೃಷಿ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಕೇಂದ್ರ ಸರಕಾರ ಈ ಸಾಲಿನ ಬಜೆಟ್‌ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ.
ಟಿ.ಕೆ.ಪರಾಶರ, ಪಪಂ ಮಾಜಿ ಅಧ್ಯಕ್ಷ, ಶೃಂಗೇರಿ

ಕಳೆದ ಹತ್ತು ವರ್ಷದಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟ ಕಾಫಿ
ಬೆಳೆಗಾರರ ಇತಿಹಾಸದಲ್ಲೇ ಬಂದಿರಲಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ದೊರೆಯುತ್ತಿಲ್ಲ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ನಮ್ಮ ಎಲ್ಲಾ ಸಮಸ್ಯೆಗಳನ್ನು ಸಂಘಟನೆಗಳ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಹಲವಾರು ಬಾರಿ ಮನವಿಯನ್ನೂ ಸಲ್ಲಿಸಿದ್ದೇವೆ. ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಕಾಫಿ ಉದ್ಯಮಕ್ಕೆ ಯಾವುದೇ ಕೊಡುಗೆ ನೀಡದೆ ಉದ್ಯಮವನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆಯಿಂದ ಬೆಳೆಗಾರರಿಗೆ ನೋವಾಗಿದೆ.
ಡಿ.ಎಂ. ವಿಜಯ್‌ಕುಮಾರ್‌,
ಕಾಫಿ ಮಂಡಳಿ ಮಾಜಿ ಸದಸ್ಯರು

„ಸಂದೀಪ್‌ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next