Advertisement

ಕೃಷಿ ಕ್ಷೇತ್ರ ಚೆನ್ನಾಗಿದ್ದರೆ ದೇಶ ಸುಭಿಕ್ಷ

06:23 PM Dec 27, 2019 | Naveen |

ಚಿಕ್ಕಮಗಳೂರು: ಕೃಷಿ ಕ್ಷೇತ್ರ, ರೈತಾಪಿ ವರ್ಗ ಹಾಗೂ ಗ್ರಾಮೀಣ ಜನರ ಬದುಕು ಚೆನ್ನಾಗಿದ್ದರೆ ದೇಶ ಸುಭಿಕ್ಷವಾಗಿರುತ್ತದೆ ಎಂದು ವಿಧಾನ ಪರಿಷತ್‌ ಉಪಸಭಾಪತಿ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌. ಎಲ್‌.ಧರ್ಮೇಗೌಡ ಹೇಳಿದರು.

Advertisement

ತಾಲೂಕಿನ ಶಿರವಾಸೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತನಿಗೆ ಕೃಷಿ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಹೋಗುವ ಹಂಬಲವಿದ್ದು, ಆರ್ಥಿಕ ನೆರವು ಹಾಗೂ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಬೆಳವಣಿಗೆ ಕುಂಠಿತವಾಗಿ ಕಷ್ಟದ ಜೀವನ ಸಾಗಿಸುತ್ತಿದ್ದಾನೆ. ಅನ್ನದಾದತನಿಗೆ ಸರಿಯಾದ ನೆಲೆ ಸಿಗುತ್ತಿಲ್ಲ. ಬದಲಾಗಿ ಆಧುನಿಕ ಯುಗಕ್ಕೆ ಮೊರೆ ಹೋಗುತ್ತಿರುವುದು ವಿಷಾದನೀಯ ಎಂದರು.

ರೈತರ ಆರ್ಥಿಕ ವ್ಯವಸ್ಥೆ ಸುಧಾರಿಸಲು ಇರುವ ಸದೃಢ ಮಾರ್ಗವೆಂದರೆ ಅದು ಸಹಕಾರಿ ಕ್ಷೇತ್ರ. ಪ್ರತಿ ವರ್ಷ ಸಹಕಾರಿ ಕ್ಷೇತ್ರ ನಡೆದು ಬಂದ ದಾರಿ ಹಾಗೂ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು ಎಂಬುದನ್ನು ಅವಲೋಕನ ಮಾಡಲು ರೈತ ದಿನಾಚರಣೆಯನ್ನು ಆಚರಿಸಬೇಕೆಂದು ಹೇಳಿದರು.

ಪ್ರತಿಯೊಬ್ಬ ರೈತ ಕುಟಂಬಕ್ಕೆ ಕನಿಷ್ಠ 3 ಲಕ್ಷದವರೆಗೆ ಬಡ್ಡಿ ರಹಿತವಾದ ಸಾಲ ಕೊಡಬೇಕು ಎಂಬ ಸರ್ಕಾರದ ಯೋಜನೆ ಸಂಪೂರ್ಣವಾಗಿ ಸಿಗುತ್ತಿಲ್ಲ. ಜಿಲ್ಲಾ ಸಹಕಾರ ಸಂಘ 10 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಯೋಜನೆಯು ಸಹ ರೈತರಿಗೆ ತಲುಪುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರೈತನ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕುಗಳು ನೀಡುತ್ತಿರುವ ಹಣವನ್ನು ರೈತರು ಸಹಕರಿಸಿ ಮರುಪಾವತಿ ಮಾಡಿ ಸಹಕಾರ ಸಂಘವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

Advertisement

ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಬಂದ ಯಾವುದೇ ಸಾಲ ಅರ್ಜಿಗಳನ್ನು ವಾಪಸ್‌ ಕಳುಹಿಸದೆ ಸಾಲಗಳನ್ನು ನೀಡಿ ರೈತನ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ಇಂದಿನ ಆಧುನಿಕ ಸಮಾಜದಲ್ಲಿ ಕೃಷಿಕನನ್ನು ಸ್ವಾವಲಂಬಿಯನ್ನಾಗಿ ಮಾಡಲು ಚಿಂತಿಸಬೇಕಾದ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ನಮ್ಮ ಬೆನ್ನೆಲುಬಾಗಿರುವ ರೈತ ಇಂದು ಹಲವು ಸಂಕಷ್ಟಗಳಿಗೆ ಒಳಗಾಗಿದ್ದಾನೆ. ಇದು ನಮ್ಮ ದೇಶದ ದುಸ್ಥಿತಿ ಎಂದು ಹೇಳಿದರು.

ಸಿದ್ಧನಗೌಡ ಅವರು ಪ್ರಾರಂಭಿಸಿದ ಸಹಕಾರಿ ಚಳವಳಿಯಿಂದಾಗಿ ಇಂದು ರಾಜ್ಯದ ಉದ್ದಗಲಕ್ಕೆ ದೊಡ್ಡ ಆಂದೋಲನವಾಗಿ ಹೊರಹೊಮ್ಮಿದೆ. ರಾಮಚಂದ್ರ ಹಾಗೂ ಮುಳ್ಳೇಗೌಡರಿಂದ ಸಹಕಾರ ಸಂಘ ಪ್ರಾರಂಭವಾಗಿ ರೈತರಿಗೆ ನೆರವು ನೀಡಿದ್ದರಿಂದ
ಶಿರವಾಸೆಯಂತಹ ಮಲೆನಾಡಿನ ಗ್ರಾಮ ಲಾಭದಾಯಕವಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಇಂದಿನ ಯುವ ಪೀಳಿಗೆ ಕೃಷಿ ಲಾಭದಾಯಕ ಕ್ಷೇತ್ರವಲ್ಲ ಎಂಬ ಕಾರಣದಿಂದ ಕೃಷಿಯ ಕಡೆ ಒಲವು ತೋರದೆ ಎಲೆಕ್ಟ್ರಾನಿಕ್‌ ಸಿಟಿಗಳ ಕಡೆ ಗಮನ ಹರಿಸುತ್ತಿದ್ದಾರೆ. ಇದರಿಂದ ಸರ್ಕಾರ ಅವರಲ್ಲಿ ಕೃಷಿಯ ಮಹತ್ವವನ್ನು ತಿಳಿಸುವಂತಹ ಪ್ರಯತ್ನ ಮಾಡಬೇಕು ಎಂದರು. ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ತಾಲೂಕು ಪಂಚಾಯತ್‌ ಅಧ್ಯಕ್ಷ ಜಯಣ್ಣ ನೆಟ್ಟೆಕೆರೆಹಳ್ಳಿ, ಜಿಲ್ಲಾ ಪಂಚಾಯತ್‌ ಸದಸ್ಯರಾದ ಜಸಿಂತಾ ಅನಿಲ್‌ ಕುಮಾರ್‌, ಕವಿತಾ ಲಿಂಗರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next