Advertisement

ಜನವರಿಯೊಳಗೆ ನೂತನ ಪ್ರವಾಸೋದ್ಯಮ ನೀತಿ ಜಾರಿ

07:09 PM Nov 02, 2019 | Naveen |

ಚಿಕ್ಕಮಗಳೂರು: ಜನವರಿ ಅಂತ್ಯದೊಳಗೆ ರಾಜ್ಯದಲ್ಲಿ ನೂತನ ಪ್ರವಾಸೋದ್ಯಮ ನೀತಿ ಜಾರಿಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಆಲೋಚಿಸಿ ಪರಿಸರ ಸ್ನೇಹಿ ನೀತಿ ಜಾರಿಗೊಳಿಸುವ ಆಲೋಚನೆ ಇದೆ.

ಬಡವರಿಗೆ ಮನೆ, ನೀರು, ರಸ್ತೆ ಮುಂತಾದ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ. ಪ್ರವಾಸೋದ್ಯಮ ಸೌಲಭ್ಯ ಕಲ್ಪಿಸುವಾಗ ಖಾಸಗಿ ಸಹಭಾಗಿತ್ವ ಅಗತ್ಯ. ಬೆಟ್ಟ ಪ್ರದೇಶಗಳಲ್ಲಿ ಕೇಬಲ್‌ ಕಾರ್‌ ಅಳವಡಿಸುವುದು ಸರ್ಕಾರದ ಆದ್ಯತೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ರೀತಿ ಪ್ರವಾಸಿ ಸೌಲಭ್ಯ ನೀಡಲು ಖಾಸಗಿ ಸಹಭಾಗಿತ್ವ ಅನಿವಾರ್ಯ ಎಂದರು.

ಪ್ರವಾಸಿಗರನ್ನು ಕರೆದೊಯ್ಯಲು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕಾರು ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಆದರೆ ಅನೇಕ ಪ್ರಕರಣಗಳಲ್ಲಿ ಇದು ಪ್ರವಾಸೋದ್ಯಮಕ್ಕೆ ಪೂರಕ ವ್ಯವಸ್ಥೆಯಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಸಹಾಯಧನ ನೀಡುವುದನ್ನು ವಿಸ್ತರಿಸಲು ಯೋಚಿಸಲಾಗಿದೆ ಎಂದರು.

ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಮುನ್ನ ಹಿಂದಿನ ಪ್ರವಾಸೋದ್ಯಮ ಸಚಿವರ ಜತೆ, ಆ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿದ್ದ ಅಧಿಕಾರಿಗಳ ಜತೆ, ಅದೇ ರೀತಿ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಮೋಹನ್‌ದಾಸ್‌ ಪೈ ಮತ್ತು ಸುಧಾ ಮೂರ್ತಿಯವರು, ಉದ್ಯಮಿಗಳು ಮತ್ತು ಈ ಕ್ಷೇತ್ರದ ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Advertisement

ಯಾವುದೇ ನೀತಿ ಜಾರಿಗೆ ತಂದರೂ ಜನರ ಮನಸ್ಥಿತಿ ಬದಲಾಗಬೇಕು. ಅದನ್ನು ಬದಲಿಸುವ ಚಿಂತನೆಯೂ ನಡೆದಿದೆ. ಜನರಿಗೆ ಅಸಕ್ತಿ ಇದ್ದಲ್ಲಿ ಪುರಾತನ ಸ್ಮಾರಕಗಳು ಉಳಿಯುತ್ತದೆ. ಪುರಾತತ್ವ ಇಲಾಖೆ ಗುರುತಿಸಿರುವ ಸ್ಮಾರಕಗಳ ಸಂಖ್ಯೆ 1500. ಆದರೆ ಗುರುತಿಸದೆ ಇರುವ ಸ್ಮಾರಕಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚು. ಉದಾಹರಣೆಗೆ ಗೌತಮೇಶ್ವರ ಕ್ಷೇತ್ರವೇ ಪುರಾತತ್ವ ಇಲಾಖೆ ಪಟ್ಟಿಯಲ್ಲಿಲ್ಲ. ಕಡೂರಿನಲ್ಲೇ ನೂರಾರು ಪಟ್ಟಿಗೆ ಸೇರದ ಸ್ಮಾರಕಗಳಿವೆ. ಇವೆಲ್ಲವನ್ನು ಈಗ ಗುರುತಿಸಿ ಸಂರಕ್ಷಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next