ಚಿಕ್ಕಮಗಳೂರು: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಹೇಗೆ ಅಗತ್ಯವೋ ಹಾಗೆಯೇ, ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನಿನ ಅರಿವು ಹಾಗೂ ಮೂಲಭೂತ ಕರ್ತವ್ಯಗಳ ತಿಳಿವಳಿಕೆ ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಹೇಳಿದರು.
ಬುಧವಾರ ನಗರದ ಫ್ರೈಡ್ ಯೂರೋ ಕಿಡ್ಸ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,
ವಾತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ
ಹಾಗೂ ಸರ್ಕಾರೇತರ ಸಂಸ್ಥೆಗಳು ಸಂಯುಕ್ತಾಶ್ರಯದಲ್ಲಿ
ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಸಂವಿಧಾನವನ್ನು ಪ್ರಾಥಮಿಕ ಹಂತದಲ್ಲೇ ತಿಳಿದುಕೊಳ್ಳಬೇಕು. ಧರ್ಮಗ್ರಂಥವನ್ನು ಓದದೇ ಇದ್ದರೂ ಭಾರತೀಯರ ಗ್ರಂಥವಾದ ಸಂವಿಧಾನವನ್ನು ಪ್ರತಿಯೊಬ್ಬರೂ ಓದಲೇಬೇಕು. ಆಗ ಮಾತ್ರ ಉತ್ತಮ ಪ್ರಜೆಯಾಗಿ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಸಂವಿಧಾನದ ಮುನ್ನುಡಿ ಹಾಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಈಗಿನಿಂದಲೇ ತಿಳಿದುಕೊಳ್ಳಬೇಕು. ಗುರುಗಳ ನಿರ್ದೇಶನದಂತೆ ನಡೆಯಬೇಕು ಹಾಗೂ ಪ್ರತಿಯೊಬ್ಬರೂ ಶಾಲೆಯಲ್ಲಿ ಪ್ರಶ್ನೆ ಕೇಳುವ ಮನೋಭಾವವನ್ನು ರೂಢಿಸಿಕೊಂಡು ಹೆಚ್ಚು ವಿಷಯ ಜ್ಞಾನವನ್ನು ತಿಳಿದುಕೊಳ್ಳಬೇಕು ಎಂದರು.
ಫ್ರೆ ಡ್ ಯೂರೋ ಕಿಡ್ಸ್ ಶಾಲೆಯ ಪ್ರಾಂಶುಪಾಲ ಸಿ.ಜಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಉತ್ತಮ ಗುರಿಯನ್ನು ಹೊಂದಿದರೆ ಸಾಧನೆಯ ಹಾದಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಆ ಹಾದಿಯಲ್ಲಿ ಎಲ್ಲರೂ ನಿಷ್ಠೆಯಿಂದ ಸಾಗಬೇಕು. ದೇಶ, ಕಾನೂನು, ಪರಿಸರ, ಪೋಷಕರು ಮತ್ತು ಸಂವಿಧಾನವನ್ನು ಗೌರವಿಸಿ ಪಾಲನೆ ಮಾಡಬೇಕು. ಆಗ ಮಾತ್ರ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್ ಮಾತನಾಡಿ, ಪ್ರತಿಯೊಂದು ಮಕ್ಕಳಿಗೆ ಕಾನೂನಿನ ಶಿಕ್ಷಣ ಅಗತ್ಯವಾಗಿದ್ದು, ಸರ್ವಧರ್ಮದವರೂ ಸಮವಾಗಿ ಶಿಕ್ಷಣ ಪಡೆಯುತ್ತಿರುವ ಶಾಲೆಗಳಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯಿಂದ ಸಂವಿಧಾನವನ್ನು ತಿಳಿದು ಕಾನೂನಿನಂತೆಯೇ ನಡೆಯಬೇಕು ಎಂದರು.
ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಸಂವಿಧಾನದ ಮುನ್ನುಡಿ ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಜಗದೀಶ್, ಯೂರೋ ಕಿಡ್ಸ್ ಶಾಲೆಯ ಉಪ ಪ್ರಾಂಶುಪಾಲೆ ರಾಜಲಕ್ಷ್ಮೀ, ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ವಿಷ್ಣು, ಶಿವಕುಮಾರ್ ಉಪಸ್ಥಿತರಿದ್ದರು.