Advertisement

ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಿಲ್ಲ ಧಕ್ಕೆ

07:56 PM Nov 02, 2019 | Naveen |

ಚಿಕ್ಕಮಗಳೂರು: ಎಲ್ಲ ಅಡೆತಡೆ ನಿವಾರಿಸಿಕೊಂಡು ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಮೌಲ್ಯ ಎತ್ತಿ ಹಿಡಿಯುವ ಕಾರ್ಯವನ್ನು ಸರ್ಕಾರ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ತಿಳಿಸಿದರು.

Advertisement

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡಿಗರ ಒಕ್ಕೊರಲ ಬೇಡಿಕೆಯಿಂದ, 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗೌರವ ಲಭಿಸಿತು. ಆದರೆ, ಅನುಷ್ಠಾನದಲ್ಲಿ ನೂರೆಂಟು ವಿಘ್ನ ಅಡಚಣೆಗಳಿದ್ದವು. ಆ ಎಲ್ಲ ಅಡೆತಡೆಗಳನ್ನೂ ವ್ಯವಸ್ಥಿತವಾಗಿ ನಿವಾರಿಸಿಕೊಂಡು ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಮೌಲ್ಯ ಎತ್ತಿ ಹಿಡಿಯುವ ಕಾರ್ಯವನ್ನು ಸರ್ಕಾರದಿಂದ ಮಾಡಲಾಗಿದೆ ಎಂದರು.

ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಮೈಸೂರು ವಿವಿ ಐದು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಮೈಸೂರು ವಿವಿ ಒಂದು ಕಟ್ಟಡದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಆರಂಭಿಸಲು ಹಾಗೂ ಕೇಂದ್ರ ಸರ್ಕಾರದಿಂದ ನೀಡಲಾಗುವ 150 ಕೋಟಿ ರೂ. ಅನುದಾನದ ಸಮರ್ಪಕ ಬಳಕೆಗೆ ಅಗತ್ಯ ರೂಪುರೇಷೆ ಸಿದ್ಧಪಡಿಸಲು ಸರ್ಕಾರ ಕಾರ್ಯಾರಂಭ ಮಾಡಿದೆ ಎಂದು ತಿಳಿಸಿದರು.

ಕನ್ನಡ ನಾಡಿನಲ್ಲಿ ಕನ್ನಡವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು, ಸರ್ವತೋಮುಖವಾಗಿ ಬೆಳೆಸಲು ನಮ್ಮ ಸರ್ಕಾರಕ್ಕೆ ಸಂಪೂರ್ಣ ಬದ್ಧತೆ ಇದೆ. ಇದಕ್ಕೆ ನಮ್ಮ ಕನ್ನಡದ ಜನರೂ ಪೂರ್ಣ ಸಹಕಾರ ನೀಡಬೇಕು. ಕನ್ನಡ ನಾಡಿನಲ್ಲಿ ಕನ್ನಡದ ಮನಸ್ಸುಗಳು ನಿರ್ಮಾಣವಾಗಬೇಕು ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಅಗತ್ಯ ಕ್ರಮಗಳಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಸಂಸ್ಕೃತಿಯನ್ನು ಒಂದು ಸೂರಿನಡಿ ಅಳವಡಿಸುವಂತಹ ಥೀಮ್‌ ಪಾರ್ಕ್‌ ನಿರ್ಮಾಣ, ಬಸವನಹಳ್ಳಿಕೆರೆ, ಕೋಟೆಕೆರೆ, ಹೀರೆಕೊಳಲೆಕೆರೆ, ಮೂಗುತಿಹಳ್ಳಿಕೆರೆ ಮುಂತಾದ ಕೆರೆಗಳ ಸಮಗ್ರ ಅಭಿವೃದ್ಧಿ ಯೋಜನೆಗಳು. ಸುಪ್ರಸಿದ್ಧ ಅಯ್ಯನಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆ, ರತ್ನಗಿರಿ ಬೋರೆಯಲ್ಲಿ ವೈವಿಧ್ಯಮಯ ಆಧುನಿಕ ಸೌಲಭ್ಯಗಳಿರುವಂತೆ ಪಾರ್ಕ್‌ನ ಅಭಿವೃದ್ಧಿ, ಬೋಳರಾಮೇಶ್ವರ ದೇಗುಲಕ್ಕೆ ಮೂಲ ಸೌಕರ್ಯ ಇವೇ ಮುಂತಾದ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರಸ್ತುತ ಸಾಲಿನಲ್ಲಿ ಅಂದಾಜು 140 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದರು.

Advertisement

ಜಿಲ್ಲೆಯ ಬಹುದಿನದ ಕನಸಾದ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳಿಂದ ಅನುಮತಿ ದೊರೆತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಆರಂಭ ಆಗಲಿದೆ. ಸುಮಾರು 325 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಮತ್ತು 170 ಕೋಟಿ ರೂ. ಅನುದಾನದಲ್ಲಿ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ನಿರ್ಮಾಣಕ್ಕೆ ಕೂಡ ಉನ್ನತ ಶಿಕ್ಷಣ ಇಲಾಖೆಯಿಂದ 58 ಕೋಟಿ ರೂ. ಮಂಜೂರು ಆಗಿದೆ. ಆಲ್ದೂರು, ಕಡೂರು, ಕೊಪ್ಪ ಪಾಲಿಟೆಕ್ನಿಕ್‌ ಕಾಲೇಜುಗಳ ಕಟ್ಟಡಗಳಿಗೆ ಕಾಯಕಲ್ಪ
ನೀಡಲು ಕೂಡ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಹೇಳಿದರು. 297 ಕೋಟಿ ಅನುದಾನದಲ್ಲಿ ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕಮಗಳೂರು-ಹಾಸನದ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಭೂಸ್ವಾಧೀನ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿದೆ ಎಂದರು.

ಆರ್‌.ಡಿ.ಪಿ.ಆರ್‌.ನಿಂದ ಸುಮಾರು 630 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಜಿಲ್ಲೆಯ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳು ಮತ್ತು ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ 870 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಜಲಧಾರೆ ಯೋಜನೆ, ಭಾರೀ ನೀರಾವರಿ ಇಲಾಖೆಯಿಂದ ಜಿಲ್ಲೆಯ 168 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣ ಈ ಮೂರು ಮಹತ್ವಪೂರ್ಣ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರುವ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಸಂಕಲ್ಪ ನಮ್ಮದಾಗಿದೆ ಎಂದು ತಿಳಿಸಿದರು.

ಅತಿವೃಷ್ಟಿಯ ಪರಿಸ್ಥಿತಿಯನ್ನು ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಸಮರ್ಥವಾಗಿ ನಿರ್ವಹಿಸಲಾಗಿದೆ. ಜಿಲ್ಲೆಗೆ ಪ್ರಾಕೃತಿಕ ವಿಕೋಪ, ಪುನರ್ವಸತಿ ಮತ್ತು ಪುನಶ್ಚೇತನ ಉದ್ದೇಶಕ್ಕಾಗಿ ಇದುವರೆಗೆ 81.12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಮಳೆ ಮತ್ತು ಭೂ ಕುಸಿತದಿಂದ ಪೂರ್ಣ ಹಾನಿಯಾದ ಮನೆಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ 95 ಸಾವಿರ ರೂ. ಪರಿಹಾರವನ್ನು ಸರ್ಕಾರ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಅಲ್ಲದೆ ಜಿಲ್ಲೆಯಲ್ಲಿ ಮಳೆ ಮತ್ತು ಭೂ ಕುಸಿತದಿಂದ ಹಾನಿಯಾದ ಕುಟುಂಬಗಳಿಗೆ ಈಗಾಗಲೇ 16.22 ಕೋಟಿ ರೂ. ಪರಿಹಾರ ಹಣ ವಿತರಿಸಲಾಗಿದೆ ಎಂದರು.

ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿ ಮಾಡುವ ಪ್ರಮುಖ ವಲಯವಾದ ಪ್ರವಾಸೋದ್ಯಮಕ್ಕೆ ಸರ್ಕಾರದಲ್ಲಿ ವಿಶೇಷ ಆದ್ಯತೆ
ದೊರೆತಿದೆ. ಸಾವಿರಾರು ವರ್ಷಗಳ ಇತಿಹಾಸ ಪರಂಪರೆ ಹೊಂದಿರುವ ಪ್ರವಾಸಿ ತಾಣಗಳನ್ನು ಜನಾಕರ್ಷಕವಾಗಿ, ಪರಿಸರಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next