ಚಿಕ್ಕಮಗಳೂರು: ಅತಿವೃಷ್ಟಿಯಿಂದ ನಿರಾಶ್ರಿತರಾದವರಿಗೆ ಹಂಚಲು ರಾಜ್ಯದ ವಿವಿಧೆಡೆಗಳ ಸಾರ್ವಜನಿಕರು ನೀಡಿದ್ದ ಅಕ್ಕಿ ಮೂಟೆಗಳು ಹುಳು ಹಿಡಿದು ಹಾಳಾಗುತ್ತಿರುವುದು ಕಂಡುಬಂದಿದೆ. ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ಕೊಠಡಿಯೊಂದರಲ್ಲಿ ಜಿಲ್ಲಾಡಳಿತ ಸಾರ್ವಜನಿಕರು ನೀಡಿದ್ದ ಅಕ್ಕಿಯನ್ನು ದಾಸ್ತಾನು ಮಾಡಿದೆ.
ಈಗಲೂ ಅಲ್ಲಿ ಸುಮಾರು 15 ಕ್ವಿಂಟಲ್ ಅಕ್ಕಿ ದಾಸ್ತಾನು ಇದ್ದು, ಕಳೆದ ಹಲವು ದಿನಗಳಿಂದ ಅಲ್ಲಿಯೇ ಇಟ್ಟಿರುವುದರಿಂದ ಅಕ್ಕಿಗೆ ಹುಳು ಹಿಡಿದಿದೆ. ಕೆಲವೊಂದು ಚೀಲ ಹರಿದು ಅಕ್ಕಿ ಕೆಳಗೆ ಬಿದ್ದಿದೆ. ಅತಿವೃಷ್ಟಿಯಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತಲ್ಲದೆ ಅನೇಕರು ನಿರಾಶ್ರಿತರಾಗಿದ್ದರು. ಜಿಲ್ಲೆಯ ಮೂಡಿಗೆರೆ, ನರಸಿಂಹರಾಜಪುರ, ಚಿಕ್ಕಮಗಳೂರು ತಾಲೂಕಿನ ವಿವಿಧೆಡೆಗಳಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಗಳಿಂದ ಅಕ್ಕಿ ಸೇರಿದಂತೆ ವಿವಿಧ ಪದಾರ್ಥಗಳನ್ನು ಸಾರ್ವಜನಿಕರು, ಸಂಘ- ಸಂಸ್ಥೆಗಳು ಇಲ್ಲಿಗೆ ಕಳುಹಿಸಿದ್ದವು.
ಆದರೆ, ನಿರಾಶ್ರಿತ ಕೇಂದ್ರ ತೆರೆದ ಭಾಗ ಹಾಗೂ ಜಿಲ್ಲೆಯ ಜನರೇ ಯಥೇತ್ಛವಾಗಿ ಅಕ್ಕಿ ನೀಡಿದ್ದರಿಂದಾಗಿ ರಾಜ್ಯದ ಹೊರ ಜಿಲ್ಲೆಗಳಿಂದ ಬಂದಿದ್ದ ಅಕ್ಕಿಯನ್ನು ಜಿಲ್ಲಾಡಳಿತ ಹೆಚ್ಚಿನ ಪ್ರಮಾಣದಲ್ಲಿ ಬಳಸಿರಲಿಲ್ಲ. ಮಳೆ ಕಡಿಮೆಯಾದ ನಂತರ ನಿರಾಶ್ರಿತರ ಕೇಂದ್ರಗಳಲ್ಲಿದ್ದ ನಿರಾಶ್ರಿತರು ಕೆಲವರು ತಮ್ಮ ಸ್ವಗ್ರಾಮಗಳಿಗೆ ತೆರಳಿದರೆ ಮತ್ತೆ ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರದಲ್ಲಿ ಮಧುಗುಂಡಿ ಗ್ರಾಮಸ್ಥರು ಹೆಚ್ಚು ದಿನ ಇದ್ದರಾದರೂ ಇತ್ತೀಚೆಗೆ ಅವರು ಸಹ ಬೇರೆಡೆಗೆ ತೆರಳಿದ್ದಾರೆ. ಈಗ ಜಿಲ್ಲೆಯ ಯಾವುದೇ ಭಾಗದಲ್ಲಿಯೂ ನಿರಾಶ್ರಿತರ ಕೇಂದ್ರಗಳು ಇಲ್ಲ. ಹಾಗಾಗಿ, ಅಕ್ಕಿಯನ್ನು ಬಳಸಲು ಸಾಧ್ಯವಾಗದೆ ಅದನ್ನು ಈಗಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ದಾಸ್ತಾನು ಮಾಡಲಾಗಿದೆ. ಆದರೆ, ಅದನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಹುಳು ಹಿಡಿದು ಅಕ್ಕಿ ಹಾಳಾಗುತ್ತಿದೆ.