Advertisement

ಸಂವಿಧಾನದ ಆಶಯಗಳ ಅರಿವು ಅಗತ್ಯ

05:06 PM Dec 06, 2019 | Team Udayavani |

ಚಿಕ್ಕಮಗಳೂರು: ಸಂವಿಧಾನದ ಮೂಲ ಆಶಯಗಳನ್ನು ಪ್ರತಿಯೊಬ್ಬರೂ ಅರಿತು ಕೊಳ್ಳುವ ಅನಿವಾರ್ಯತೆ ಇದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಉಮೇಶ್‌ ಎಂ.ಅಡಿಗ ಹೇಳಿದರು.

Advertisement

ನಗರದ ನಾಯ್ಡು ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ.ಕೆ.ಎಸ್‌. ಕಾನೂನು ಕಾಲೇಜು, ಜಿಲ್ಲಾ ವಕೀಲರ ಸಂಘ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನ ಮತ್ತು ವಕೀಲರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಒಂದು ಉತ್ತಮ ಗ್ರಂಥವಾಗಿ ರೂಪುಗೊಂಡಿದೆ. ಅದರ ರಚನೆಗೆ ಮಹನೀಯರ ಕಠಿಣ ಪರಿಶ್ರಮವೇ ಕಾರಣವಾಗಿದ್ದು, ಧರ್ಮಗ್ರಂಥಗಳಿಗಿಂತ ಪವಿತ್ರವಾಗಿದೆ. ದೇಶದಲ್ಲಿ ವಿವಿಧ ರೀತಿಯ ಕಾನೂನುಗಳನ್ನು ಜಾರಿಗೆ ತಂದರೂ ಅವುಗಳೆಲ್ಲಾ ಸಂವಿಧಾನದ ಮೌಲ್ಯ ಮತ್ತು ಆಶಯಗಳ ಚೌಕಟ್ಟಿನಲ್ಲಿರಬೇಕು ಎಂದು ಹೇಳಿದರು.

ಇಂದಿನ ವಿದ್ಯಾರ್ಥಿಗಳು ಪೋಕ್ಸೋ ಮತ್ತು ಮೋಟಾರು ವಾಹನಗಳ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಬಾಲ್ಯ ವಿವಾಹ ಪ್ರಕರಣಗಳಿಗೆ ಪೋಕ್ಸೋ ಕಾಯಿದೆ ಅಡಿ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ವಿ.ಟಿ.ಥಾಮಸ್‌ ಮಾತನಾಡಿ, ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ವಕೀಲರು ಮತ್ತು ವಿದ್ಯಾರ್ಥಿಗಳಿಂದ ಮಾತ್ರ ಇದರ ನಿರ್ಮೂಲನೆ ಸಾಧ್ಯ. 1947ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಜಾರಿಯಾಗಿದ್ದು, ಜನರಿಗೆ ಇದರ ಬಗ್ಗೆ ಅರಿವು ಇಲ್ಲದಿರುವುದರಿಂದ ನಿಯಂತ್ರಣ ಸಾಧ್ಯವಾಗಿಲ್ಲ ಎಂದರು.

Advertisement

ಭ್ರಷ್ಟಾಚಾರದಲ್ಲಿ ಭಾರತ 81ನೇ ಸ್ಥಾನದಲ್ಲಿದ್ದು, ಯಾವುದೇ ಅಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬಂದರೆ ಅದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಬಹುದಾಗಿದೆ. ಭ್ರಷ್ಟಾಚಾರ ತಡೆಯಲು ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.

ಸಹಾಯಕ ಕಾರ್ಮಿಕ ಆಯುಕ್ತ ಕೆ.ಜಿ.ಜಾನ್ಸನ್‌ ಸಂವಿಧಾನ ಮತ್ತು ಮೂಲಭೂತ ಕರ್ತವ್ಯಗಳ ಮುನ್ನುಡಿ ಕುರಿತು, ವಕೀಲ ಎ.ಎಂ.ಧೃವಕುಮಾರ್‌ ಬಾಲ್ಯವಿವಾಹ, ಸಹಾಯಕ ಪ್ರಾಧ್ಯಾಪಕಿ ಪಿ.ಕೆ.ವಿನೀತಾ ಪೋಕ್ಸೋ ಕಾಯ್ದೆ ಮತ್ತು ವಕೀಲ ಎಸ್‌.ಎಸ್‌.ವೆಂಕಟೇಶ್‌ ಮಾನವೀಯ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ಎಂ.ಕೆ.ಎಸ್‌. ಕಾನೂನು ಕಾಲೇಜಿನ ಅಧ್ಯಕ್ಷ ಬಿ.ಕೇಶವ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ, ಎಂ.ಕೆ.ಎಸ್‌. ಕಾನೂನು ಕಾಲೇಜಿನ ಪ್ರಾಂಶುಪಾಲೆ ಜಿ.ಭಾಗ್ಯಲಕ್ಷ್ಮೀ , ವಕೀಲ ದೇವೇಂದ್ರಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next