ಮಹಾದೇವ ಪೂಜೇರಿ
ಚಿಕ್ಕೋಡಿ: ಬೇಸಿಗೆಯಲ್ಲಿ ನೀರಿಲ್ಲದೇ ಒಣಗಿ ಹೋಗುತ್ತಿದ್ದ ಕಬ್ಬಿನ ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದ ರೈತನಿಗೆ ನೆರೆ ಹಾವಳಿ ದೊಡ್ಡ ಆಘಾತ ನೀಡಿದೆ. ಪ್ರಸಕ್ತ ವರ್ಷ ಸಿಹಿ ನೀಡಬೇಕಾದ ಕಬ್ಬು ಕಹಿಯಾಗಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ಭೀಕರ ಪ್ರವಾಹದಿಂದ ಕಬ್ಬು ನೆಲಕಚ್ಚಿದೆ. ಶೇ 15ರಷ್ಟು ಬರಗಾಲದಿಂದ ನಾಶವಾದರೆ ಶೇ 45ರಷ್ಟು ಕಬ್ಬು ನೆರೆ ಹಾವಳಿಗೆ ತುತ್ತಾಗಿದೆ. ಇದರಿಂದ ರೈತರ ಜೊತೆಗೆ ಸಕ್ಕರೆ ಕಾರ್ಖಾನೆಗಳಿಗೂ ದೊಡ್ಡ ಹೊಡೆತ ಬಿದ್ದು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕೋಡಿ ಉಪ ಕೃಷಿ ನಿರ್ದೇಶಕರ ಕಚೇರಿ ವ್ಯಾಪ್ತಿಗೆ ಒಳಪಡುವ ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ಮತ್ತು ಗೋಕಾಕ ತಾಲೂಕಿನಲ್ಲಿ 1,88, 840 ಹೆಕ್ಟೇರ ಪ್ರದೇಶದಲ್ಲಿ ರೈತರು ಕಬ್ಬು ನಾಟಿ ಮಾಡಿದ್ದರು. ಇದರಲ್ಲಿ ಅಂದಾಜು 85 ಸಾವಿರ ಹೆಕ್ಟೇರ್ ಕಬ್ಬು ಸಂಪೂರ್ಣ ನಾಶವಾಗಿರುವುದು ಬೆಳಕಿಗೆ ಬಂದಿದೆ. ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಹಿರಣ್ಯಕೇಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ಕಳೆದ ಎಂಟು ದಿನಗಳಿಂದ ಕಬ್ಬಿನ ಬೆಳೆ ನಡು ನೀರಿನಲ್ಲಿ ನಿಂತುಕೊಂಡು ಸಂಪೂರ್ಣ ಹಾನಿಯಾಗಿದೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇದೇ ನದಿಗಳಿಗೆ ಹನಿ ನೀರು ಇಲ್ಲದೇ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು.
ಕಳೆದ ಎಂಟು ದಿನಗಳಿಂದ ಕಬ್ಬಿನ ಬೆಳೆಗೆ ಬಿಸಿಲು ತಾಗದಂತೆ, ಉಸಿರಾಟಕ್ಕೂ ಅವಕಾಶವಿಲ್ಲದಂತಾಗಿದೆ, ಸಾಕಷ್ಟು ಪ್ರಮಾಣದಲ್ಲಿ ನದಿ ಭಾಗದಿಂದ ಮಣ್ಣು ಕಬ್ಬಿನ ಎಲೆ ಭಾಗದ ಮೇಲೆ ಬಿದ್ದಿದೆ, ಪ್ರತಿವರ್ಷ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರು ಸಾವಿರಾರು ರೂ. ಖರ್ಚುಮಾಡಿ ಕಬ್ಬು ಬೆಳೆ ಬೆಳೆಯುತ್ತಾರೆ. ಆದರೆ ಸಂಪೂರ್ಣವಾಗಿ ಬೆಳೆಗೆ ಹಾನಿಯಾಗಿದ್ದರಿಂದ ರೈತರು ಅರ್ಥಿಕ ಸಮಸ್ಯೆ ಎದುರಿಸುವ ಕಾಲ ಸನ್ನಿಹಿತವಾಗಿದೆ ಎನ್ನುತ್ತಾರೆ ಕಬ್ಬು ಬೆಳೆಗಾರರು.
ಕಬ್ಬು ಬೆಳೆ ನಾಟಿ ಮಾಡುವುದರಿಂದ ಹಿಡಿದು ಬೀಜ, ನೀರು, ದುಡಿಮೆ ಈ ಎಲ್ಲವನ್ನು ನೋಡಿದಾಗ ಈ ವರ್ಷ ರೈತರಿಗೆ ಸಂಪೂರ್ಣ ಹಾನಿ ಅನುಭವಿಸಿದ್ದಾರೆ. ಸಂಕಷ್ಟದಲ್ಲಿದ್ದ ಕಬ್ಬು ಬೆಳೆಗಾರರಿಗೆ ಈ ವರ್ಷ ಸಕ್ಕರೆ ಕಾರ್ಖಾನೆಗಳೂ ಸಹ ಸಹಕರಿಸುವ ಅಗತ್ಯವಿದೆ. ಕಬ್ಬು ಉತ್ಪಾದಕರು ”ನೀ ಎನಗಾದರೆ ನಾ ನಿನಗೆ” ಎಂಬಂತೆ ಸಕ್ಕರೆ ಕಾರ್ಖಾನೆಗಳಿಗೆ ಕೈ ಹಿಡಿಯಬೇಕಾದ ಪ್ರಸಂಗ ಈ ವರ್ಷ ಬಂದಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಕಲ್ಲೊಳ, ಯಡೂರ, ಮಾಂಜರಿ, ಇಂಗಳಿ, ಅಂಕಲಿ, ಚಂದೂರ, ಸದಲಗಾ, ಜನವಾಡ, ಮಲಿಕವಾಡ. ನಿಪ್ಪಾಣಿ ತಾಲೂಕಿನ ಬೇಡಕಿಹಾಳ, ಶಮನೇವಾಡಿ, ಕಾರದಗಾ, ಭೋಜ, ಬಾರವಾಡ, ಮಾಂಗೂರ, ಕುನ್ನುರ, ಹುನ್ನರಗಿ, ಜತ್ರಾಟ, ಕೋಡ್ನಿ, ಭಾಟನಾಗನೂರ, ಬುದಿಹಾಳ, ಕೊಗನೋಳಿ, ಬೋರಗಾಂವ, ರಾಯಬಾಗ ತಾಲೂಕಿನ ಬಾ.ಸವದತ್ತಿ, ಚಿಂಚಲಿ, ನಸಲಾಪುರ, ದಿಗ್ಗೇವಾಡಿ, ಜಲಾಲಪೂರ, ಅಥಣಿ ತಾಲೂಕಿನ ಜುಗಳ, ಮಂಗಾವತಿ, ಶಿರಗುಪ್ಪಿ, ನಾಗನೂರ,ಸತ್ತಿ, ಗೋಕಾಕ ತಾಲೂಕಿನ ಢವಳೇಶ್ವರ, ಸುಣಧೋಳಿ, ಅಡಿಬಟ್ಟಿ, ಗೋಕಾಕ, ಹುಣಶ್ಯಾಳ, ತಳಕಟನಾಳ, ತಿಗಡಿ, ಮಸಗುಪ್ಪಿ, ಹುಕ್ಕೇರಿ ತಾಲೂಕಿನ ಘೋಡಗೇರಿ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಕಬ್ಬು ನೆರೆಯಿಂದಾಗಿ ನಾಶವಾಗಿದೆ.