ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ಮತ್ತು ಉಪನದಿಗಳಿಗೆ ಮಂಗಳವಾರ 1 ಲಕ್ಷ ಕ್ಯುಸೆಕ್ ನೀರು ಹರಿದು ಬರಲಾರಂಬಿಸಿದೆ.
ಇದೇ ರೀತಿ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದರೇ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹರಿದಿರುವ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಕೋಯ್ನಾ, ಮಹಾಬಲೇಶ್ವರ, ನವಜಾ, ಪಾಟಗಾಂವ ಮತ್ತು ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ನಿರಂತರಾಗಿ ಜಿಟಿಜಿಟಿ ಮಳೆ ಚಾಲ್ತಿಯಲ್ಲಿದೆ. ಕಳೆದ 24 ಗಂಟೆಯಲ್ಲಿ ಕೃಷ್ಣಾ ಮತ್ತು ದೂಧಗಂಗಾ ನದಿಗೆ ಎರಡು ಅಡಿಯಷ್ಟು ನೀರು ಹೆಚ್ಚಳವಾಗಿದೆ. ಹೀಗೆ ದಿನದಿಂದ ದಿನಕ್ಕೆ ಮಳೆ ಮುಂದುವರೆದರೇ ಮತ್ತೊಮ್ಮೆ ಪ್ರವಾಹ ಎದುರಾಗುವ ಲಕ್ಷಣ ಹೆಚ್ಚಿದೆ.
ಕೃಷ್ಣಾ ನದಿಯ ರಾಜಾಪೂರ ಬ್ಯಾರೇಜದಿಂದ 78 ಸಾವಿರ ಕ್ಯುಸೆಕ್ ನೀರು ಹರಿದು ಬಂದರೆ ದೂಧಗಂಗಾ ವೇದಗಂಗಾ ನದಿಗಳಿಗೆ 22 ಸಾವಿರ ಕ್ಯುಸೆಕ್ ನೀರು ಬಂದು ಕೃಷ್ಣಾ ನದಿಗೆ ಸೇರುತ್ತದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬರಲಾರಂಬಿಸಿದೆ.
ನರಸಿಂಹವಾಡಿ- ಕಲ್ಲೋಳ ದತ್ತ ಮಂದಿರ ಜಲಾವೃತ: ಕೃಷ್ಣಾ ನದಿ ತಟದಲ್ಲಿ ಇರುವ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ನರಸಿಂಹವಾಡಿ ಶ್ರೀ ದತ್ತ ಮಂದಿರ ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಶ್ರೀ ದತ್ತ ಮಂದಿರ ಜಲಾವೃತಗೊಂಡಿವೆ. ಭಕ್ತರ ದರ್ಶನ ಬಂದ್ ಇದ್ದು, ದೇವಸ್ಥಾನ ಆಡಳಿತ ಮಂಡಳಿ ದೇವರ ದರ್ಶನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.