ಚಿಕ್ಕೋಡಿ: ನಗರದ ಬೀದಿ ಬದಿ ಗಾಡಾ ಅಂಗಡಿ ಮತ್ತು ಹೊಟೇಲ್ ನಲ್ಲಿ ಆಹಾರದಲ್ಲಿ ಟೇಸ್ಟಿಂಗ್ ಪೌಡರ್ ಕಲಬೆರಕೆ ಮಾಡಿ ಆಹಾರ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಮತ್ತು ಟೇಸ್ಟಿಂಗ್ ಪೌಡರ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 17 ಕೆಜಿ ಟೇಸ್ಟಿಂಗ್ ಪೌಡರ್ ವಶಪಡಿಸಿಕೊಂಡಿದ್ದಾರೆ.
ಆಹಾರದಲ್ಲಿ ವಿಷ ಪದಾರ್ಥಗಳು ಕಲಬೆರಕೆ ಕುರಿತು ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆ ನಗರದ ರಾಜಸ್ತಾನಿ ಕಿರಾಣಿ ಅಂಗಡಿ ಮೇಲೆ ದಾಳಿ ಮಾಡಿದಾಗ ಆಹಾರದಲ್ಲಿ ಕಲಬೆರಕೆ ಮಾಡುವ ಟೇಸ್ಟಿಂಗ್ ಪೌಡರ್ ಸಿಕ್ಕಿದೆ. ಅದನ್ನು ವಶಪಡಿಸಿಕೊಂಡು ಅವರಿಗೆ ನೋಟಿಸ್ ಜಾರಿ ಮಾಡಿ ದಂಡ ಹಾಕಲಾಗುತ್ತದೆ ಎಂದು ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ತಿಳಿಸಿದರು.
ಬೀದಿ ಬದಿ ಗಾಡಾ ಅಂಗಡಿಗಳು ಮತ್ತು ಪ್ರಸಿದ್ಧ ಹೊಟೇಲ್ ಮಾಲಿಕರು ಆಹಾರದಲ್ಲಿ ವಿಷ ವಸ್ತುಗಳನ್ನು ಕಲಬೆರಕೆ ಮಾಡಬಾರದೆಂದು ಸರ್ಕಾರ ಟೇಸ್ಟಿಂಗ್ ಪೌಡರ್ ನಿಷೇಧ ಮಾಡಿದೆ. ಆದರೂ ವ್ಯಾಪಾರಸ್ಥರು ಟೇಸ್ಟಿಂಗ್ ಪೌಡರ್ ಹಾಕಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈಗಾಗಲೇ ಟೇಸ್ಟಿಂಗ್ ಪೌಡರ್ ಮಾರಾಟ ಮಾಡುವ ಅಂಗಡಿ ಮತ್ತು ಆಹಾರದಲ್ಲಿ ಕಲಬೆರಕೆ ಮಾಡುವ ಬೀದಿ ಬದಿ ಗಾಡಗಳ ಮೇಲೆ ದಾಳಿ ನಡೆಸಲಾಗಿದೆ ಎಂದರು.
ಪುರಸಭೆ ಸದಸ್ಯ ಸಾಭೀರ ಜಮಾದಾರ ಮಾತನಾಡಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಟೆಸ್ಟಿಂಗ್ ಪೌಡರ್ ಮಾರಾಟ ಮಾಡುವ ಅಂಗಡಿ ಮೇಲೆ ದಾಳಿ ಮಾಡಿರುವ ಪುರಸಭೆ ಅಧಿಕಾರಿಗಳ ಕ್ರಮ ಸ್ವಾಗತಿಸಲಾಗುತ್ತದೆ. ನಗರದ ಪ್ರತಿಯೊಂದು ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಷ ಪದಾರ್ಥಗಳನ್ನು ವಶಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ದಾಳಿಯಲ್ಲಿ ಪ್ರಭಾರಿ ಆರೋಗ್ಯ ನಿರೀಕ್ಷಕ ಆರ್.ಎಂ.ಚಿನಗಂಡಿ ಮತ್ತು ಸಿಬ್ಬಂದಿಗಳು ಇದ್ದರು.