Advertisement

ಚಿಕ್ಕೋಡಿ: ಮರುಭೂಮಿಯಂತಾದ ಕೃಷ್ಣೆ ಒಡಲು ಕುಡಿಯುವ ನೀರಿಗೂ ತತ್ವಾರ

06:38 PM Jun 20, 2023 | Team Udayavani |

ಚಿಕ್ಕೋಡಿ: ಜೂನ ತಿಂಗಳು ಮೂರನೆ ವಾರ ಕಳೆಯುತ್ತಾ ಬಂದರೂ ಮುಂಗಾರು ಮಳೆ ಆಗುತ್ತಿಲ್ಲ. ಇದರಿಂದ ಗಡಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ ಏರಿದೆ. ಚಿಕ್ಕೋಡಿ. ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಜೀವನಾಡಿ ಕೃಷ್ಣಾ ನದಿ ಬತ್ತಿ ಬರಡಾಗಿದೆ. ಅನ್ನದಾತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

Advertisement

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕಿನ ನಗರ, ಪಟ್ಟಣ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡುವ ಯೋಜನೆಗಳು ಸ್ಥಗಿತಗೊಂಡಿವೆ. ಚಿಕ್ಕೋಡಿ ತಾಲೂಕಿನ ಕೆಲವು ಗ್ರಾಮಗಳ ಹತ್ತಿರ ತಗ್ಗು ಪ್ರದೇಶದಲ್ಲಿ ಕೃಷ್ಣಾ ನದಿ ನೀರು ಇದ್ದು. ಉಳಿದ ಕಡೆ ನದಿ ಬತ್ತಿ ಬರಿದಾಗಿದೆ. ಇದರಿಂದ ಜನ- ಜಾನುವಾರಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

1500 ಕ್ಯೂಸೆಕ್‌ ನೀರು ಖಾಲಿ ಖಾಲಿ: ಕಳೆದ ವಾರದ ಹಿಂದೆಯಷ್ಟೇ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ ಮೂಲಕ ರಾಜ್ಯಕ್ಕೆ 1500 ಕ್ಯೂಸೆಕ್‌ ನೀರು ಬಂದಿತ್ತು. ಆ ನೀರು ಚಿಕ್ಕೋಡಿ ತಾಲೂಕಾ ಗಡಿಯವರೆಗೆ ಮಾತ್ರ ತಲುಪಿದವು. ಉಳಿದ ಕಾಗವಾಡ, ಅಥಣಿ, ಕುಡಚಿ ಭಾಗದಲ್ಲಿ ಕೃಷ್ಣಾ ನದಿ ನೀರು ಇಲ್ಲದೇ ಮರುಭೂಮಿಯಂತಾಗಿದೆ.

ಕೋಯ್ನಾ ಜಲಾಶಯದಲ್ಲಿ ನೀರು ಇಳಿಕೆ: ರಾಜ್ಯದ ಕೃಷ್ಣಾ ನದಿಗೆ ನೀರು ಬರುವ ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ ಸದ್ಯ 11 ಟಿಎಂಸಿ ನೀರು ಮಾತ್ರ ಇದೆ ಎಂದು ಅಲ್ಲಿನ ನೀರಾವರಿ ಇಲಾಖೆ ಮಾಹಿತಿ ನೀಡಿದೆ. 103 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಕೋಯ್ನಾ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರಲ್ಲಿ ಆತಂಕ ಹೆಚ್ಚಿಸಿದೆ.

ಜೂನ್‌ ತಿಂಗಳ ಮೊದಲ ವಾರದಲ್ಲಿ ಕೊಂಕಣ ಭಾಗದಲ್ಲಿ ಮಳೆ ಆಗುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕೂಡ ಮಳೆ ವಾತಾವರಣ ಇಲ್ಲವಾಗಿದೆ. ಮಳೆ ನೋಡಿಕೊಂಡು ಮಹಾರಾಷ್ಟ್ರ ನೀರಾವರಿ ಇಲಾಖೆ ಅ ಧಿಕಾರಿಗಳು ಕೃಷ್ಣಾ ನದಿಗೆ ನೀರು ಬಿಡುತ್ತಾರೆ. ಆದರೆ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿಯೇ ಮಳೆ ಇಲ್ಲದೇ ಇರುವುದು ಸಮಸ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

Advertisement

ನೀರು ಇಲ್ಲದೆ ಒಣಗಿದ ಬೆಳೆಗಳು: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಕುಡಚಿ, ರಾಯಬಾಗ, ಅಥಣಿ ಮತ್ತು ಚಿಕ್ಕೋಡಿ ತಾಲೂಕಿನ ಮಡ್ಡಿ ಪ್ರದೇಶಗಳಲ್ಲಿ ನೀರು ಇಲ್ಲದೆ ಕಬ್ಬು ಒಣಗಿ ಹೋಗಿವೆ. ಸಾಲ ಸೋಲ ಮಾಡಿ ಬೆಳೆಸಿದ ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಕಳೆದ ಎರಡು ಮೂರು ವರ್ಷದಲ್ಲಿ ಕೊರೊನಾ, ಅತಿವೃಷ್ಟಿಯಿಂದ ಕಂಗೆಟ್ಟಿರುವ ರೈತನಿಗೆ ಈಗ ಮಳೆ ಆಗದೇ ಇರುವುದು ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.

ಕೋಯ್ನಾ ಮತ್ತು ವಿವಿಧ ಡ್ಯಾಂಗಳಿಂದ ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಗಡಿ ಭಾಗದ ರೈತರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಈಗಾಗಲೇ ಮಹಾರಾಷ್ಟ್ರ ಸರಕಾರಕ್ಕೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ನದಿ ನೀರಿನ ಮಟ್ಟ ಕಡಿಮೆ ಆದಾಗ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಈಗಾಗಲೇ ಎರಡು ಬಾರಿ ನೀರು ಬಿಡಿಸಿಕೊಂಡು ಬಂದಿದ್ದಾರೆ. ಆದರೂ ಚಿಕ್ಕೋಡಿ ಉಪವಿಭಾಗದ ಗಡಿಯವರೆಗೆ ನೀರು ಹೋಗದೇ ಇರುವುದು ರೈತರಿಗೆ ಸಮಸ್ಯೆಯುಂಟಾಗಿದೆ. ರಾಜ್ಯ ಸರಕಾರ ಸೂಕ್ತ ಗಮನ ಹರಿಸಿ ನದಿಗೆ ನೀರು ಬಿಡಿಸಲು ಎಲ್ಲ ಜನಪ್ರತಿನಿ ಧಿಗಳು ಪ್ರಯತ್ನ ಮಾಡಬೇಕು ಎಂದು ರೈತ ಮುಖಂಡ ಮಂಜುನಾಥ ಪರಗೌಡ ಒತ್ತಾಯಿಸಿದ್ದಾರೆ.

*ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next