ಚಿಕ್ಕೋಡಿ: ಪರಿಸರ ಸಂರಕ್ಷಣೆ ಹಾಗೂ ಸಮರ್ಪಕ ಮಳೆ ಆಗಲು ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕೆನ್ನುವ ಉದ್ದೇಶದೊಂದಿಗೆ ಜೂನ್ ತಿಂಗಳಲ್ಲಿ ಆರಂಭವಾಗುವ ಮುಂಗಾರು ಹಂಗಾಮಿನಲ್ಲಿ ಸಸಿ ನೆಡಲು ಇಲ್ಲಿನ ಪ್ರಾದೇಶಿಕ ಅರಣ್ಯ ಇಲಾಖೆಯು ವಿವಿಧ ಜಾತಿಯ ಲಕ್ಷ ಸಸಿಗಳನ್ನು ಬೆಳೆಸಿ ಪೋಷಣೆ ಮಾಡುತ್ತಿದೆ.
ಚಿಕ್ಕೋಡಿ ಮತ್ತು ಹುಕ್ಕೇರಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸಸಿ ನೆಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಚಿಂಚಣಿ ಮತ್ತು ಜೈನಾಪುರ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ ಒಂದು ಲಕ್ಷ ಸಸಿಗಳನ್ನು ಬೆಳೆಸುತ್ತಿದೆ. ಆಸಕ್ತ ರೈತರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೆೇಜಿನ ಮೈದಾನದಲ್ಲಿ ಸಸಿ ನೆಡಲು ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.
ರಿಯಾಯತಿ ದರದಲ್ಲಿ ಸಸಿ: ಪ್ರಸಕ್ತ ವರ್ಷ 72,590 ಸಸಿಗಳನ್ನು ಅರಣ್ಯ ಇಲಾಖೆ ಮೂಲಕ ರಸ್ತೆ ಬದಿ, ಅರಣ್ಯ ಪ್ರದೇಶ, ನಿಪ್ಪಾಣಿ ನಗರ, ಚಿಕ್ಕೋಡಿ ನಗರ ಹಾಗೂ ಹುಕ್ಕೇರಿ ತಾಲೂಕಿನಲ್ಲಿ ನೆಡಲು ಬೆಳೆಸಿದೆ. ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲು 28,590 ಸಸಿಗಳನ್ನು ಬೆಳೆಸುತ್ತಿದೆ. ರಾಷ್ಟ್ರೀಯ ಗ್ರಾಮೀಣ ಅರಣ್ಯೀಕರಣ ಯೋಜನೆಯಡಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಸಂಕಲ್ಪ ಹೊಂದಿರುವ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ತಾಲೂಕಿನ ಜೈನಾಪುರ ಮತ್ತು ಚಿಂಚಣಿ ಗ್ರಾಮದ ಹತ್ತಿರ ಇರುವ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ 1 ಲಕ್ಷಕ್ಕಿಂತ ಹೆಚ್ಚಿನ ಸಸಿಗಳನ್ನು ಪೋಷಿಸಲಾಗುತ್ತದೆ.
ಸಸಿಗಳ ಪೋಷಣೆ: ಪ್ರಾದೇಶಿಕ ಅರಣ್ಯ ಇಲಾಖೆಯು ತಾಲೂಕಿನ ಜೈನಾಪುರ ಗ್ರಾಮದ ಕೆರೆ ಹತ್ತಿರ ಹಾಗೂ ಚಿಂಚಣಿ ಸಸ್ಯಪಾಲನಾ ಕೇಂದ್ರದಲ್ಲಿ ಅತ್ತಿ, ಅರಳಿ, ಆಲ, ಗೋಣಿ, ಸಂಪಿಗೆ, ಹುನಸೆ, ಗ್ಲಿರಿಸಿಡಿಯಾ, ಹುಲಗಲ, ತಪಸಿ, ಬಂಗಾಲಿ, ಬೇವು, ಬಾದಾಮ, ಬಕುಳಿ ಇವುಗಳನ್ನು ಇಲಾಖೆ ನೆಡುತ್ತದೆ. ರೈತರಿಗಾಗಿ ನುಗ್ಗೆ, ಪತ್ರಿ, ಕರಿಬೇವು, ನೆಲ್ಲಿ, ಸೀತಾಫಲ, ಡಾಳಂಬರಿ, ಪಪ್ಪಾಯಿ, ಶ್ರೀಗಂಧ, ಹುಣಸೆ, ಮಾವು, ನೆಲ್ಲಿ, ಮಲ್ಲಿಗೆ ಸಸಿಗಳು ಬೆಳೆದು ನಿಂತಿವೆ.
ಶ್ರೀಗಂಧಕ್ಕೆ ಹೆಚ್ಚಿದ ಬೇಡಿಕೆ: ಮೊದಲು ಶ್ರೀಗಂಧ ಬೆಳೆಸಲು ಸರ್ಕಾರದ ಅನುಮತಿ ಇರಲಿಲ್ಲಿ, ಆದರೆ ಇತ್ತೀಚೆಗೆ ಸರ್ಕಾರ ಕಾನೂನು ಸಡಿಲಗೊಳಿಸಿ ಶ್ರೀಗಂಧ ಬೆಳೆಸಲು ಅನುಮತಿ ನೀಡಿದೆ. ಹೀಗಾಗಿ ಶ್ರೀಗಂಧದ ಸಸಿಗಳನ್ನು ಖರೀದಿಸಲು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಬಿಸಿಲಿನ ಧಗೆಗೆ ಶ್ರೀಗಂಧ ಸಸಿಗಳು ಬಾಡಿ ಹೋಗುತ್ತಿವೆ. ಸಸಿಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಅರಣ್ಯ ಇಲಾಖೆ ನಗರ ಹಸಿರೀಕರಣ ಯೋಜನೆಯಡಿ ನಿಪ್ಪಾಣಿ ನಗರದ 1.5 ಕಿ.ಮೀ. ಪ್ರದೇಶ ಹಾಗೂ ಚಿಕ್ಕೋಡಿ ನಗರದ 1.5 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಗಿಡಮರಗಳ ಸಸಿಗಳನ್ನು ನೆಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಮತ್ತು ಹುಕ್ಕೇರಿ ತಾಲೂಕಿನ 3 ಕಿ.ಮೀ. ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವ ಯೋಜನೆ ಸಿದ್ಧವಾಗಿದೆ. ಕೆಶಿಪ್ ರಸ್ತೆ ಬದಿಯಲ್ಲಿ ಸಸಿ ನೆಡಲು ಕ್ರಮ ಕೈಗೊಂಡಿದೆ. ನರೇಗಾ ಯೋಜನೆಯಡಿ 15 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ಕಳೆದ ವರ್ಷ ಚಿಂಚಣಿ, ಆಡಿ, ಕೇರೂರ, ನಾಯಿಂಗ್ಲಜ, ಗುಡಸ, ಬೆಳವಿ, ನಿಡಸೋಸಿ ಪ್ರದೇಶಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಅದೇ ಮಾದರಿಯಲ್ಲಿ ಈ ವರ್ಷವು ಕೂಡಾ ಸಸಿಗಳನ್ನು ನೆಡಲಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ಆಸಕ್ತ ರೈತರಿಗೆ ಸಸಿಗಳ ಅಳತೆಗೆ ಅನುಗುಣವಾಗಿ 1 ರೂ. ಮತ್ತು 3 ರೂ.ಗೆ ಒಂದೊಂದು ಸಸಿಗಳನ್ನು ವಿತರಿಸಲಾಗಿದೆ. ಮೂರು ವರ್ಷಗಳ ಕಾಲ ಆ ಸಸಿಗಳನ್ನು ನೆಟ್ಟು ಸಮರ್ಪಕವಾಗಿ ಪೋಷಣೆ ಮಾಡಿದ ರೈತರಿಗೆ ಮೊದಲ ಮತ್ತು ಎರಡನೇ ವರ್ಷದಲ್ಲಿ ತಲಾ ಒಂದು ಸಸಿಗೆ 30 ರೂ. ಮತ್ತು ಮೂರನೇ ವರ್ಷದಲ್ಲಿ 40 ರೂ. ಸೇರಿದಂತೆ ಒಟ್ಟು 100 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಆಸಕ್ತ ರೈತರು ಗಿಡಮರಗಳನ್ನು ಬೆಳೆಸಲು ಮುಂದೆ ಬರಬೇಕು.
•
ಮೃತ್ಯುಂಜಯ ಗಣಾಚಾರಿ,
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚಿಕ್ಕೋಡಿ