ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕತ್ತಿ ಮತ್ತು ಜೊಲ್ಲೆ ನಡುವೆ ತೀವ್ರ ಪೈಪೋಟಿ ನಡೆದಿದೆ. ಇದನ್ನು ಶಮನ ಮಾಡಲು ರಾಜ್ಯ ಬಿಜೆಪಿ ಘಟಕ ಮಧ್ಯಸ್ಥಿಕೆ ವಹಿಸಿ ಕತ್ತಿ ಮತ್ತು ಜೊಲ್ಲೆಕುಟುಂಬದ ಜೊತೆ ಅಂತಿಮ ಮಾತುಕತೆ ನಡೆಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು, ಯಡಿಯೂರಪ್ಪ ನಡೆಸಿರುವ ಸಭೆ ಯಶಸ್ವಿಯಾದರೆ ಸೋಮವಾರ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆ ಕುರಿತು ಬಿಜೆಪಿ ಕೆಲ ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರ ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಅದರಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ವಿಳಂಬ ಅನುಸರಿ ಸಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧೆಗಿಳಿ ಯಲು ಮಾಜಿ ಸಂಸದ ರಮೇಶ ಕತ್ತಿ ಮತ್ತು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ನಡುವೆ ಪೈಪೋಟಿ ಎದುರಾಗಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಬಿಜೆಪಿ ಹೈಕಮಾಂಡ್ ಮೇಲಿದೆ.
ಈಗಾಗಲೇ ಕತ್ತಿ ಮತ್ತು ಜೊಲ್ಲೆ ಕುಟುಂಬ ಬೆಂಗಳೂರಿನಲ್ಲಿ ಬಿಡುಬಿಟ್ಟಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಎರಡು ಕುಟುಂಬಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸಹಕಾರಿ ರಂಗದ ಮೂಲಕ ಕ್ಷೇತ್ರದಲ್ಲಿ ಒಳ್ಳೆಯ ಒಡನಾಟ ಇಟ್ಟುಕೊಂಡಿರುವ ನನ್ನ ಪತಿ ಅಣ್ಣಾ ಸಾಹೇಬಗೆ ಟಿಕೆಟ್ ನೀಡಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪಟ್ಟು ಹಿಡಿದಿದ್ದಾರೆ.
ಅದೇ ರೀತಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 2009ರಲ್ಲಿ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿ 2014ರಲ್ಲಿ ಕೇವಲ 3003 ಮತಗಳ ಅಂತರದಲ್ಲಿ ಪರಾಭವಗೊಂಡಿರುವ ತಮ್ಮ ಸಹೋದರ ರಮೇಶ ಕತ್ತಿಗೆ ಟಿಕೆಟ್ ನೀಡಬೇಕೆಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಬಿಜೆಪಿ ಹೈ-ಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ.
ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡಬೇಕೆಂದು ಕುಡಚಿ ಶಾಸಕ ಪಿ.ರಾಜೀವ್, ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷOಉಣ ಸವದಿ ಮತ್ತು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತೀವ್ರ ಲಾಬಿ ನಡೆಸಿದ್ದಾರೆ. ಆದರೆ ಅಣ್ಣಾಸಾಹೇಬ ಅವರಿಗೆ ಟಿಕೆಟ್ ಕೊಟ್ಟರೆ ಕತ್ತಿ ಕುಟುಂಬ ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿದೆ. ರಮೇಶ ಕತ್ತಿಗೆ ಟಿಕೆಟ್ ಲಭಿಸಿದರೂ ಜೊಲ್ಲೆ ಮತ್ತು ಸವದಿ ಬಂಡಾಯ ಎಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಅಣ್ಣಾಸಾಹೇಬ ಜೊಲ್ಲೆ ಮತ್ತು ರಮೇಶ ಕತ್ತಿ ಪ್ರಬಲ ಆಕಾಂಕ್ಷಿಗಳಾಗಿರುವುದರಿಂದ ಟಿಕೆಟ್‌ಗೆ ಪೈಪೋಟಿ ಸಾಮಾನ್ಯ. ಯಡಿಯೂರಪ್ಪನವರು ಈಗಾಗಲೇ ಇಬ್ಬರು ಅಭ್ಯರ್ಥಿಗಳನ್ನು ಕರೆಸಿ ಮಾತುಕತೆ ನಡೆಸಿದ್ದು, ಸೋಮವಾರ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ. ಯಾರೇ ಸ್ಪ ರ್ಧಿಸಿದರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ.
● ಶಶಿಕಾಂತ ನಾಯಿಕ, ಬಿಜೆಪಿ ಜಿಲ್ಲಾಧ್ಯಕ್ಷ, ಚಿಕ್ಕೋಡಿ
ಮಹಾದೇವ ಪೂಜಾರಿ