ಚಿಕ್ಕಬಳ್ಳಾಪುರ: ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಬಂದು ದಾಖಲೆಗಳನ್ನು ಪಡೆದು ಪರಾರಿಯಾಗಿದ್ದ ವ್ಯಕ್ತಿಯನ್ನು ನಗರದ ಪೋಲಿಸರು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನದ ರವೀಂದ್ರ ನಗರದ ಗುತ್ತಿಗೆದಾರ ಹೆಚ್.ಟಿ. ಜ್ಞಾನೇಶ್ ಬಂಧಿತ ಆರೋಪಿ.
ಘಟನೆಯ ವಿವರ: ಸೆ.22 ರಂದು ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿ ಎಂದು ಪರಿಚಯಿಸಿಕೊಂಡು ಕಚೇರಿಯಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ, ಅಸಂಬದ್ಧವಾಗಿ ವರ್ತಿಸಿದ್ದು, ತಾಲೂಕು ತಹಶೀಲ್ದಾರ್ ಗಣಪತಿ ಶಾಸ್ತ್ರಿ ವಿಚಾರಿಸಿ, ಗುರುತಿನ ಚೀಟಿ ಕೇಳಿದಾಗ ವ್ಯಕ್ತಿಯು ಪರಾರಿಯಾಗಿದ್ದ ಈತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿತ್ತು. ಆ ವ್ಯಕ್ತಿ ತಾನು ಪ್ರಣವ್ ಎಂದು ಪರಿಚಯಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅವರ ಮಾರ್ಗದರ್ಶನದಲ್ಲಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಹೋಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ತನ್ನ ಪರಿಚಯಸ್ಥ ರಾಜೇಶ್ ಮತ್ತು ದೃಶ್ಯಂತ್ ಅವರೊಡನೆ ಸೊಪ್ಪಹಳ್ಳಿ ಗ್ರಾಮದ ಸರ್ವೆ ನಂ.103 ರಲ್ಲಿನ 12.31 ಎಕರೆ ಪಿತ್ರಾರ್ಜಿತ ಜಮೀನಿನ ದಾಖಲೆಗಳನ್ನು ಸಂಗ್ರಹಿಸುವ ನೆಪದಲ್ಲಿ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿ.ಕೆ.ವಾಸುದೇವ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ರಾಜು ಬಿ., ಪಿ.ಎಸ್.ಐ. ಶಿವಣ್ಣ, ಸಂಗಮೇಶ್ ಎಂ.ಕೆ. ಮತ್ತು ಸಿಬ್ಬಂದಿಯಾದ ಪೆಂಚಲಪ್ಪ ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಭಾಗವಹಿಸಿದ್ದರು.