Advertisement

ವಿಚಾರ ಭಾವದಾಚೆಯ ಸಾಮಾನ್ಯತೆ ಪರಿಚಯಿಸಿದವರು ತೇಜಸ್ವಿ

06:59 PM Apr 26, 2021 | Team Udayavani |

ಕೊಟ್ಟಿಗೆಹಾರ: ವಿಚಾರ ಭಾವದಾಚೆಯ ಸಾಮಾನ್ಯತೆಯನ್ನು ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಜನಸಾಮಾನ್ಯರ ಅಂತರ್ಗತವಾಗಿರುವಂತಹ ಮೌಲ್ಯಕ್ಕೆ ಸಾಹಿತ್ಯದ ಮೂಲಕ ಮನ್ನಣೆಯನ್ನು ತಂದುಕೊಟ್ಟವರು ತೇಜಸ್ವಿಯವರು ಎಂದು ಕಳಸಾಪುರ ಕಾಲೇಜಿನ ಪ್ರಾಂಶುಪಾಲ ಎಚ್‌.ಎಂ. ನಾಗರಾಜ ರಾವ್‌ ಕಲ್ಕಟ್ಟೆ ಹೇಳಿದರು.

Advertisement

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ “ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಬಚೂರಿನ ಪೋಸ್ಟಾಪೀಸು ಕೃತಿಯ ಬಗ್ಗೆ ಅವರು ಮಾತನಾಡಿದರು. ತೇಜಸ್ವಿಯವರು ಅನುಭಾವದ ನೆಲೆಯಲ್ಲಿ ಬದುಕನ್ನು ಗ್ರಹಿಸುವಂತಹ ಪ್ರಯತ್ನವನ್ನು ಮಾಡಿದವರು. ಬದುಕಿನ ಕ್ಷುದ್ರ ಅನುಭವಗಳನ್ನು ಚಿಮ್ಮು ಹಲಗೆಯನ್ನಾಗಿ ಮಾಡಿಕೊಂಡು ಅನಂತ ಸಾಧ್ಯತೆಯಿಂದ ಓದುಗರನ್ನು ಚಿಂತನೆಗೆ ಹಚ್ಚಿದವರು.

ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ಮತ್ತು ಸರಿಪಡಿಸುವ ಪ್ರಜ್ಞೆಯಿಂದ ಬರಹವನ್ನು ಬರೆಯುವುದು ತೇಜಸ್ವಿಯವರ ವಿಶಿಷ್ಟತೆ ಎಂದರು. ಅಬಚೂರಿನ ಪೋಸ್ಟಾಪೀಸು ಕೃತಿಯ ಮುನ್ನುಡಿಯಲ್ಲಿ ತೇಜಸ್ವಿಯವರು ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡಿರುವ ನವ್ಯ ಸಾಹಿತ್ಯದ ಕ್ರಾಂತಿಕಾರಿತನವನ್ನು ಚೇಡಿಸಿದ್ದಾರೆ. ಬರಹದ ರೂಪದಲ್ಲಿ ಸಾಹಿತ್ಯದ ಮಟ್ಟಿಗೆ ಮಾತ್ರ ಸೀಮಿತವಾಗುತ್ತಿದೆ. ಅದರಿಂದ ಸಮಾಜಕ್ಕೆ ಯಾವುದೇ ರೀತಿ ಪ್ರಭಾವ ಆಗ್ತಾ ಇಲ್ಲ ಎನ್ನುವುದನ್ನು ತೇಜಸ್ವಿಯವರು ಈ ಕೃತಿಯ ಮುನ್ನುಡಿಯಲ್ಲಿ ಚೇಡಿಸಿದ್ದಾರೆ.

70 ರ ದಶಕದಲ್ಲಿ ಭಾರತದಲ್ಲಿ ಜನಶಕ್ತಿ ಜಾಗೃತವಾಯ್ತು. ಸರ್ವಾಧಿ ಕಾರಿ ಶಕ್ತಿಯನ್ನು ತಿರಸ್ಕರಿಸುವಂತಹ ಪ್ರಜ್ಞೆ ಮೂಡಿತು. ಸಮಾಜದಲ್ಲಿ ಹೊಸ ಪಲ್ಲಟವಾಯ್ತು. ಹೊಸ ಚಲನೆ ಮೂಡಿತು. ಹೀಗಾಗಿ ತೇಜಸ್ವಿ ಹಿಂದಿನಂತೆ ಆಗದೇ ಒಂದು ಹೊಸ ಹೆದ್ದಾರಿಯನ್ನು ಬರಹಕ್ಕೆ ತಂದುಕೊಡಬೇಕು ಎಂಬ ಪ್ರಯತ್ನಕ್ಕೆ ಹೊರಳಿದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಎಲೆಕ್ಟ್ರಿಯೇಷನ್‌ ಹಾಗೂ ಸೌಂಡ್‌ ಸೂಪರ್‌ ವೈಸರ್‌ ಶ್ರೀನಿವಾಸ್‌, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್‌, ಕಾರ್ಯಕ್ರಮದ ಸಂಯೋಜಕ ನಂದೀಶ್‌ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್‌ ಹ್ಯಾರಿಸ್‌, ಪ್ರಜ್ವಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next