Advertisement

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

12:21 AM Sep 30, 2024 | Team Udayavani |

ಮಲ್ಪೆ: ಕರಾವಳಿ ಭಾಗದ ಮಲ್ಪೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಸಂಜೆಯಾಗುತ್ತಿದ್ದಂತೆಯೇ ಮನೆ ಮನೆಗಳಲ್ಲಿ ಗೆಜ್ಜೆನಾದ, ಮದ್ದಳೆ, ತಾಳದ ಅಬ್ಬರ ಕೇಳಿಸುತ್ತದೆ. ಭಾಗವತಿಕೆಯ ಗಾಯನ ಮೊಳಗುತ್ತದೆ. ಇದು ತೊಟ್ಟಂನ ಬಡಾನಿಡಿಯೂರು ಗಜಾನನ ಯಕ್ಷಗಾನ ಕಲಾಸಂಘದ ಕಲಾವಿದರು ಕಳೆದ 67 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಚಿಕ್ಕಮೇಳದ ಯಕ್ಷಗಾನ ಪ್ರದರ್ಶನ.

Advertisement

ಅಕ್ಟೋಬರ್‌ ತಿಂಗಳ ಹುಣ್ಣಿಮೆಯಿಂದ ಆರಂಭಗೊಂಡು ನವರಾತ್ರಿಯ ಕೊನೆಯ ದಿನದವರೆಗೆ ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಚಿಕ್ಕಮೇಳದ ತಿರುಗಾಟಕ್ಕೆ ನವರಾತ್ರಿ ವಿಶೇಷ ಎಂಬ ಹೆಗ್ಗಳಿಕೆಯೂ ಇದೆ. ಎಲ್ಲ ಚಿಕ್ಕಮೇಳಗಳಂತೆ ಇಲ್ಲಿಯೂ ತಂಡವೊಂದು ಮನೆಗಳಿಗೆ ಭೇಡಿ ನೀಡಿ ಕಿರು ಪ್ರಸಂಗವನ್ನು ಆಡಿ ತೋರಿಸುತ್ತದೆ. ಆದರೆ, ವಿಶೇಷವೇನೆಂದರೆ, ಇದು ಕೇವಲ ಹಿಂದೂಗಳ ಮನೆಗೆ ಮಾತ್ರವಲ್ಲ ಕ್ರಿಶ್ಚಿಯನ್‌, ಮುಸ್ಲಿಂ ಸಮುದಾಯದ ಮನೆಗಳಲ್ಲೂ ಪ್ರದರ್ಶನ ನೀಡುತ್ತದೆ. ಜತೆಗೆ ಯಾವುದೇ ಅವಸರವಿಲ್ಲದೆ, ಒಂದು ಕಥಾನಕವನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.

ವಿದೇಶದಲ್ಲಿದ್ದವರಿಗೆ ನೇರಪ್ರಸಾರ!

ತೊಟ್ಟಂ ಮೇಳದ ಈ ಪ್ರದರ್ಶನಕ್ಕೆ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದವರಿಂದ ದೊಡ್ಡ ಮಟ್ಟದ ಪ್ರೋತ್ಸಾಹವಿದೆ. ಇಲ್ಲಿ ಇರುವವರು ಮಾತ್ರವಲ್ಲ, ವಿದೇಶದಲ್ಲಿರುವವರೂ ಬೆಂಬಲಿಸುತ್ತಾರೆ. ಯಾವುದಾದರೂ ಮನೆಗೆ ಹೋದಾಗ ಆ ಮನೆಯವರು ವಿದೇಶದಲ್ಲಿದ್ದರೆ ಅವರು ಮೊಬೈಲ್‌ನಲ್ಲಿ ವೀಡಿಯೊ ಕಾಲ್‌ ಮೂಲಕ ನೇರವಾಗಿ ಪ್ರದರ್ಶನ ವೀಕ್ಷಿಸುವುದು, ಕೆಲವೊಮ್ಮೆ ಬೇರೆ ಪ್ರಸಂಗಕ್ಕೆ ಬೇಡಿಕೆ ಇಡುವುದೂ ಉಂಟು.

ಮುಂಬಯಿಯ ಮನೆಗಳಲ್ಲೂ ಸೇವೆ
ಗಜಾನನ ಯಕ್ಷಗಾನ ತಂಡವು ಕೆಲವು ವರ್ಷದ ಹಿಂದೆ ದೂರದ ಮುಂಬಯಿಯಲ್ಲೂ ಪ್ರದರ್ಶನ ನೀಡಿತ್ತು. ಸುಮಾರು 15 ದಿನಗಳ ಕಾಲ ಆಹ್ವಾನದ ಮೇರೆಗೆ ಪ್ರಮುಖ ಮನೆಗಳಿಗೆ ತೆರಳಿ ಗೆಜ್ಜೆನಾದವನ್ನು ಮೊಳಗಿಸಿತ್ತು. ಗಜಾನನ ಕಲಾಸಂಘ ಬಿಟ್ಟರೆ ಇದುವರೆಗೆ ಯಾವ ತಂಡವೂ ಮುಂಬಯಿಯಲ್ಲಿ ಚಿಕ್ಕಮೇಳ ಪ್ರದರ್ಶನ ನೀಡಿಲ್ಲ ಎಂದು ಚಿಕ್ಕಮೇಳ ನೇತೃತ್ವವನ್ನು ವಹಿಸಿದ ಶಶಿಧರ ಎಂ. ಅಮೀನ್‌ ಹೇಳುತ್ತಾರೆ.

ಆಹ್ವಾನಿಸಿದ ಮನೆಯಲ್ಲಿ ಪ್ರದರ್ಶನ
ಸಾಮಾನ್ಯವಾಗಿ ಚಿಕ್ಕಮೇಳಗಳು ತಮ್ಮ ಮನೆಗೆ ಬರಬಹುದೇ ಎಂಬ ಕೋರಿಕೆಯನ್ನು ಇಡುತ್ತವೆ. ಆದರೆ, ತೊಟ್ಟಂ ಮೇಳವನ್ನು ಜನರೇ ಆಹ್ವಾನಿಸಿ ಕಲಾಸೇವೆ ನೀಡುವಂತೆ ಮನವಿ ಮಾಡುತ್ತಾರೆ. ಹಾಗೆ ಆಹ್ವಾನಿಸಿದ ಮನೆಗಳಿಗೆ ಮಾತ್ರ ತಂಡ ಹೋಗಿ ಪ್ರದರ್ಶನ ನೀಡುತ್ತದೆ. ಇಲ್ಲಿ ಕೇವಲ ಕಲಾವಿದರು ಮಾತ್ರವಲ್ಲ, ತಂಡದ ಸುಮಾರು 30ರಷ್ಟು ಸದಸ್ಯರು ಕೂಡ ಜತೆಗೆ ಹೋಗಿ ಗೌರವಪೂರ್ವಕವಾಗಿ ಪ್ರದರ್ಶನ ನೀಡುವುದು ವಿಶೇಷ.

ಕನಿಷ್ಠ 20 ನಿಮಿಷದ ಪ್ರದರ್ಶನ
ಸುಮಾರು 20ರಿಂದ 30 ನಿಮಿಷಗಳ ಕಾಲ ಪೌರಾಣಿಕ ಕಥೆಗಳ ತುಣುಕನ್ನು ಪ್ರಸ್ತುತಪಡಿಸಲಾಗುತ್ತದೆ. ಕೆಲವು ಕಡೆ ಬೇಡಿಕೆ ಮೇರೆಗೆ ಎರಡು ಮೂರು ಪ್ರಸಂಗಗಳನ್ನು ಆಡಿ ತೋರಿಸಲಾಗುತ್ತದೆ. ಸಂಜೆ 6-30ರಿಂದ 10-30ರ ರವರೆಗಿನ ತಿರುಗಾಟದ ಆವಧಿಯಲ್ಲಿ ಪ್ರತಿ ದಿನ 12 ಮನೆಗಳಲ್ಲಿ ಪ್ರದರ್ಶನ ನೀಡುತ್ತಾರೆ.

Advertisement

ನಮ್ಮ ಮನೆಯಲ್ಲಿ ಹಿಂದಿನಿಂದಲೂ ಯಕ್ಷಗಾನದ ಬಗ್ಗೆ ಎಲ್ಲರಿಗೂ ಆಸಕ್ತಿ. ಇಲ್ಲಿನ ಗಜಾನನ ಯಕ್ಷಗಾನ ತಂಡ ನಮ್ಮ ಅಜ್ಜನ ಕಾಲದಿಂದ ಇವತ್ತಿನವರೆಗೂ ಪ್ರದರ್ಶನವನ್ನು ನೀಡುತ್ತ ಬಂದಿದೆ. ಮನೆ ಮಂದಿ ಒಟ್ಟಾಗಿ ಕುಳಿತು ಈ ಚಿಕ್ಕಮೇಳದ ಪ್ರದರ್ಶನವನ್ನು ಆಸ್ವಾದಿಸುತ್ತೇವೆ. ಇವರು ನಮ್ಮ ಸಮುದಾಯದ ಸುತ್ತಮುತ್ತಲಿನ ಎಲ್ಲ ಮನೆಗೂ ಹೋಗುತ್ತಾರೆ.
-ಸರ್ಫರಾಜ್‌, ವಡಭಾಂಡೇಶ್ವರ

ಕಳೆದ 67 ವರ್ಷಗಳಿಂದ ನಾವು ಪ್ರತೀ ವರ್ಷ ನವರಾತ್ರಿ ಸಂದರ್ಭದಲ್ಲಿ ಆಹ್ವಾನದ ಮೇರೆಗೆ ಮಲ್ಪೆ ಹಾಗೂ ಸುತ್ತಮುತ್ತಲ ಪ್ರಮುಖ ಮನೆಗಳಲ್ಲಿ ಪ್ರದರ್ಶನ ನೀಡುತ್ತೇವೆ. ಎಲ್ಲರೂ ಹವ್ಯಾಸಿ ಕಲಾವಿದರಾದ್ದರಿಂದ ನಮ್ಮಲ್ಲಿ ಜೀವನ ನಿರ್ವಹಣೆಗಾಗಿ ಈ ಸೇವೆ ಮಾಡುವವರಿಲ್ಲ. ಸೇವಾ ರೂಪದಲ್ಲಿ ಬಂದ ಹಣವನ್ನು ಸಂಘಕ್ಕೆ ನೀಡಲಾಗುತ್ತದೆ.
– ಶಶಿಧರ ಎಂ. ಅಮೀನ್‌
ಅಧ್ಯಕ್ಷರು, ಗಜಾನನ ಯಕ್ಷಗಾನ ಕಲಾಸಂಘ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next