Advertisement

ಗೋಹತ್ಯೆ ನಿಷೇಧ ಕಾಯ್ದೆ ಜಾಗೃತಿ ಮೂಡಿಸಿ

04:38 PM Jan 31, 2021 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಿದ್ದು, ಕಾಯ್ದೆಯ ಬಗ್ಗೆ ರೈತರು ಮತ್ತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕೆಂದು ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್‌ ಅಧಿ ಕಾರಿಗಳಿಗೆ ಸೂಚಿಸಿದರು.
ಶನಿವಾರ ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕುರಿತು, ಇಲಾಖೆ ಪ್ರಗತಿ ಪರಿಶೀಲಿಸಿ ಸಭೆಯಲ್ಲಿ ಮಾತನಾಡಿದರು.

Advertisement

ಕಾಯ್ದೆ ಜಾರಿಯ ನಂತರ ಗೋಶಾಲೆಗಳ ನಿರ್ಮಾಣ ಇಲಾಖೆಯ ಮೊದಲ ಆದ್ಯತೆಯಾಗಿದೆ. ಜಿಲ್ಲೆಯಲ್ಲಿ ಗೋಶಾಲೆ ತೆರೆಯಲು ಅನುಕೂಲವಾಗುವಂತೆ ಪ್ರತಿ ತಾಲೂಕಿನಲ್ಲಿ ಗೋಮಾಳ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರಿಗೆ ಸೂಚನೆ
ನೀಡಿದರು.

“ಗೋಮಾತೆ ನನ್ನ ಮಾತೆ’ ಎಂಬ ಘೋಷವಾಕ್ಯ ಹೊಂದಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ. ಯಾವ ರೀತಿ ಗೋವು ರಕ್ಷಣೆ ಮಾಡಬೇಕೆಂಬುದು ಮುಖ್ಯವಾಗಿದೆ. ಇಲಾಖೆ ಅ ಧಿಕಾರಿಗಳು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಸೈಲೋ ನೀಡಬೇಕೆಂದು ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಹಾಣ್‌ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುವುದು ಜಿಲ್ಲೆಯಲ್ಲಿ ಜಾಗ ಗುರುತಿಸಿದರೆ ಗೋಸದನ ಮಂಜೂರು ಮಾಡುವುದಾಗಿ ಸಭೆಗೆ ತಿಳಿಸಿದರು. ಕಡೂರು ಪಟ್ಟಣದ ಸ್ವಲ್ಪ ದೂರದಲ್ಲಿ 11 ಎಕರೆ ಜಾಗ ಗುರುತಿಸಲಾಗಿದ್ದು, ಅಲ್ಲಿ ಗೋಸದನ ನಿರ್ಮಾಣ ಮಾಡಲು ಸಾಧ್ಯವೆಂದು ಕಡೂರು ಪಶು
ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು ಸಚಿವರ ಗಮನ ಸೆಳೆದರು. ಮೂಡಿಗೆರೆ ಮತ್ತು ಶೃಂಗೇರಿ ತಾಲೂಕು ಪಶುವೈದ್ಯರು ಗ್ರಾಮಗಳಿಗೆ ಬರುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವಿಚ್‌ ಆಫ್‌ ಮಾಡುತ್ತಾರೆಂಬ ದೂರು ಬಂದಿವೆ. ಇಂತಹ ದೂರು ಮತ್ತೆ ಮರುಕಳಿಸಬಾರದು. ಏನಾದರೂ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು. ಪ್ರಾಣಿಗಳನ್ನು ಚಿಕಿತ್ಸೆಗೆ ಪಶು ಆಸ್ಪತ್ರೆಗೆ ಕರೆ ತಂದರೆ ಔಷಧ ತರಲು ಚೀಟಿ ಬರೆದು ಕೊಡಲಾಗುತ್ತಿದೆ ಎಂಬ ದೂರು ಬಂದಿವೆ.

ಯಾವುದೇ ಕಾರಣಕ್ಕೂ ಚೀಟಿ ಬರೆದು ಕೊಡಬಾರದು. ಇಂತಹ ಘಟನೆ ಮತ್ತೆ ನಡೆಯಬಾರದು ಎಂದು ಎಚ್ಚರಿಸಿದರು. ಪಶು ಸಂಗೋಪನೆ ಇಲಾಖೆ ಉತ್ತಮ ನಿರ್ವಹಣೆಯಲ್ಲಿ ಜಿಲ್ಲೆ ರಾಜುದಲ್ಲೇ 6ನೇ ಸ್ಥಾನದಲ್ಲಿದೆ. 1 ಪಾಲಿಕ್ಲಿನಿಕ್‌, 25 ಪಶು ಆಸ್ಪತ್ರೆ, 71ಪಶು ಚಿಕಿತ್ಸಾಲಯ, 31 ಪ್ರಾಥಮಿಕ ಪಶುಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಉಪ ನಿರ್ದೇಶಕ ಡಾ| ಪ್ರಕಾಶ್‌ ತಿಳಿಸಿದರು.
ಜಿಲ್ಲೆಯಲ್ಲಿ 79,836 ಮಿಶ್ರತಳಿ ದನಗಳು, 2,57,740 ಸ್ಥಳೀಯ ದನಗಳು, 70,870 ಎಮ್ಮೆಗಳು, 91,312 ಕುರಿಗಳು, 46,068 ಮೇಕೆಗಳು,
2,158 ಹಂದಿಗಳು, 42,577 ಶ್ವಾನಗಳು ಇವೆ. ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಶೇ.98ರಷ್ಟು, ತರೀಕೆರೆ ಶೇ.87, ಕಡೂರು ನ.ರಾ.ಪುರದಲ್ಲಿ ಶೇ.91, ಕೊಪ್ಪದಲ್ಲಿ ಶೇ.91ರಷ್ಟು ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಜಿಲ್ಲೆಯ 4 ಪಶು ಆಸ್ಪತ್ರೆಗಳು ಹಳೇ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಅಧಿಕಾರಿಗಳು ತಿಳಿಸಿದರು. ಸಚಿವರು ಪ್ರತಿಕ್ರಿಯಿಸಿ ಹೊಸಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್‌ ಮಾತನಾಡಿ, ಕಾಯ್ದೆಯ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಆಡು ಭಾಷೆಯಲ್ಲಿ ಭಿತ್ತಿಪತ್ರಗಳನ್ನು ಮುದ್ರಿಸಿ ಗ್ರಾಪಂ, ಪಶು ಆಸ್ಪತ್ರೆಗಳಲ್ಲಿ ಹಾಕುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌. ಅಕ್ಷಯ್‌, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಮತ್ತಿತರರು ಇದ್ದರು.

ಓದಿ : ಶಿವಾಜಿ ನಮ್ಮವನೇ.. ಮಹಾರಾಷ್ಟ್ರ ಸರ್ಕಾರ ಮನೆಯೊಂದು ಮೂರು ಬಾಗಿಲಾಗಿದೆ: ಲಕ್ಷ್ಮಣ ಸವದಿ

Advertisement

Udayavani is now on Telegram. Click here to join our channel and stay updated with the latest news.

Next