ಬೀರೂರು: ಮನುಷ್ಯ ಸಾವಯವ ಕೃಷಿಯತ್ತ ಆಸಕ್ತಿ ತೋರದೆ ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಮಣ್ಣಿನ ಸತ್ವವನ್ನು ಸಾಯಿಸುತ್ತಿದ್ದಾನೆ. ನಾವು ಸತ್ತಾಗ ಮಣ್ಣು ಮಾಡುತ್ತಾರೆ. ಆದರೆ ಮಣ್ಣೇ ಸತ್ತರೆ ಏನಾಗಬಹುದು ಎಂದು ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸುರೇಶ ದೇವಾಂಗ ಅಭಿಪ್ರಾಯಪಟ್ಟರು.
ಪಟ್ಟಣದ ನೆಹರುನಗರ ಬಡಾವಣೆಯಲ್ಲಿ ಗುರುವಾರ ದೇವಾಂಗ ಸಂಘದಿಂದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಬನದ ಹುಣ್ಣಿಮೆ ಮತ್ತು 7ನೇ ವರ್ಷದ ಅನ್ನದಾಸೋಹ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ದುಡಿಮೆಯನ್ನು ಅರಸಿ ದೇಶ- ವಿದೇಶಗಳನ್ನು ಸುತ್ತಿ ಬಂದರೂ ನಮ್ಮ ಮಣ್ಣಿನ ಮೇಲಿನ ಪ್ರೀತಿ ಕುಂದಿಲ್ಲ. ಎಷ್ಟೇ ವಿದ್ಯಾಭ್ಯಾಸ ಪಡೆದರೂ ನಾನು ಆಸಕ್ತಿ ತೋರಿದ್ದು ಕೃಷಿ ಕ್ಷೇತ್ರಕ್ಕೆ ಮಾತ್ರ. ಕೇವಲ 6 ಎಕರೆ ಜಮೀನು ಹೊಂದಿ ಅದರಲ್ಲಿ 13 ವಿವಿಧ ಬೆಳೆಯನ್ನು ಬೆಳೆಯುವ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಿ ವ್ಯವಸಾಯದಲ್ಲಿ ಸಾಧಿ ಸಿ ತೋರಿಸಿದ್ದೇನೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರು, ರೈತ ಮತ್ತು ಸೈನಿಕ ದೇಶದ ಮೂರು ಕಣ್ಣುಗಳಿದ್ದಂತೆ ಮತ್ತು ಈ ಮೂರು ಕ್ಷೇತ್ರಗಳಿಗೆ ಜಾತಿ, ಧರ್ಮ, ವರ್ಣ ಭೇದಗಳಿಲ್ಲ. ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಪುರಸಭೆ ಅಧ್ಯಕ್ಷ ಎಂ.ಪಿ. ಸುದರ್ಶನ್ ಕಾರ್ಯಕ್ರಮ ಉದ್ಘಾಟಿಸಿದರು. ದೇವಾಂಗ ಸಮಾಜದ ಗೌರವಾಧ್ಯಕ್ಷ ಅರೇಕಲ್ ಕಾಂತರಾಜ್, ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿದರು. ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಾಂಗ ಸಮಾಜದ ಅಧ್ಯಕ್ಷ ಬಿ.ಕೆ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯೆ ಸಹನಾ ಸಾಕಮ್ಮ, ಬಿ.ಕೆ. ಶಶಿಧರ್, ಸಂಘದ ರವೀಂದ್ರ, ತಿಪ್ಪೇಶ್, ಶಿವಮೂರ್ತಿ, ಮಂಜುನಾಥ್, ಲೋಕೇಶಪ್ಪ, ಜೆಡಿಎಸ್ ಮುಖಂಡ ಬಾವಿಮನೆ ಮಧು, ಗಂಗಾಧರಯ್ಯ, ಲೋಕೇಶಪ್ಪ ಇದ್ದರು.
ಓದಿ :
ಯತ್ನಾಳ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಲ್ಲ