Advertisement

ಮಾತೃಪೂರ್ಣ ಯೋಜನೆ ಶೇ.60 ಯಶಸ್ವಿ

03:56 PM Oct 16, 2019 | Naveen |

ಚಿಕ್ಕಮಗಳೂರು: ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಶೇ.60ರಷ್ಟು ಮಾತ್ರ ಯಶಸ್ವಿಯಾಗಿದೆ.

Advertisement

ಮಾತೃಪೂರ್ಣ ಯೋಜನೆ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ಸರ್ಕಾರ ಆಲೋಚಿಸಿತ್ತು. ಅಲ್ಲದೇ, ನಂತರ ಆರು ತಿಂಗಳು ಬಾಣಂತಿಯರಿಗೂ ಉತ್ತಮ ಆಹಾರ ನೀಡುವ ಆಲೋಚನೆಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರದಲ್ಲಿ ಅನ್ನ, ಸಾಂಬಾರು, ಪಲ್ಯ, ಮೊಟ್ಟೆ, ಶೇಂಗಾ ಚಟ್ನಿ ಹಾಗೂ ಹಾಲನ್ನು ನೀಡಲು ಮುಂದಾಗಿತ್ತು.

ಈ ಯೋಜನೆ ಆರಂಭವಾದಾಗ ಗರ್ಭಿಣಿಯರು ಹಾಗೂ ಬಾಣಂತಿಯರು ಇರುವ ಮನೆಗಳಿಗೆ ಹೋಗಿ ಆಹಾರ ನೀಡಲು ಅಂಗನವಾಡಿ ಕೇಂದ್ರಗಳಿಗೆ ಸೂಚಿಸಲಾಗಿತ್ತು. ಆನಂತರ ಇದು ಕಷ್ಟಸಾಧ್ಯ ಹಾಗೂ ಮನೆಗೆ ಹೋಗಿ ನೀಡಿದಾಗ ಅದು ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಮಾತ್ರ ಸಿಗದೇ ಮನೆಯ ಇನ್ನಿತರ ಮಂದಿ ಸಹ ಅದರಲ್ಲಿ ಪಾಲು ಪಡೆಯುತ್ತಿದ್ದರು.

ಹಾಗಾಗಿ, ಅಂಗನವಾಡಿ ಕೇಂದ್ರಗಳಿಗೆ ಹೋಗಿ ಆಹಾರ ಸೇವಿಸಲು ಅವರಿಗೆ ಸೂಚಿಸಲಾಯಿತು. ಆದರೆ, ಈ ವ್ಯವಸ್ಥೆ ಸಹ ಈಗ ಯಶಸ್ವಿಯಾಗಿಲ್ಲ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಅಂಕಿ-ಅಂಶ ಸ್ಪಷ್ಟಪಡಿಸುತ್ತದೆ. ಮಾತೃಪೂರ್ಣ ಯೋಜನೆಯಡಿ ಒಟ್ಟು ಇಲಾಖೆ ನೋಂದಣಿ ಮಾಡಿಕೊಂಡಿರುವ ಗರ್ಭಿಣಿ ಮತ್ತು ಬಾಣಂತಿಯರ ಸಂಖ್ಯೆ 12912.

ಆದರೆ, ಆಯಾ ಅಂಗನವಾಡಿ ಕೇಂದ್ರಗಳಿಗೆ ಪ್ರತಿನಿತ್ಯ ಬಂದು ಊಟ ಮಾಡುತ್ತಿರುವ ಗರ್ಭಿಣಿ ಮತ್ತು ಬಾಣಂತಿಯರ ಸಂಖ್ಯೆ 6933. ಇವರಲ್ಲಿ ಗರ್ಭಿಣಿಯರ ಸಂಖ್ಯೆ 3336 ಆದರೆ, ಬಾಣಂತಿಯರ ಸಂಖ್ಯೆ 3597. ಇವರ ಜತೆಗೆ ಆಹಾರ ತಯಾರಿಸಿ ಅವರಿಗೆ ನೀಡುವ 1786 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1656 ಮಂದಿ ಸಹಾಯಕಿಯರು ಸೇರಿ ಪ್ರತಿನಿತ್ಯ 10375 ಮಂದಿ ಆಹಾರ ಸ್ವೀಕರಿಸುತ್ತಿದ್ದಾರೆ.

Advertisement

ಮಲೆನಾಡಿನಲ್ಲಿ ಕ್ಷೀಣ: ದಟ್ಟ ಮಲೆನಾಡು ಕೊಪ್ಪ ತಾಲೂಕಿನಲ್ಲಿ ಅಂಗನವಾಡಿಗೆ ಬಂದು ಆಹಾರ ಸ್ವೀಕರಿಸಲು ದಾಖಲಿಸಿಕೊಂಡ ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ 584. ಆದರೆ, ಅಲ್ಲಿಗೆ
ಬಂದು ಆಹಾರ ಸ್ವೀಕರಿಸುತ್ತಿರುವ ಗರ್ಭಿಣಿಯರ ಸಂಖ್ಯೆ 121 ಆದರೆ, ಬಾಣಂತಿಯರ ಸಂಖ್ಯೆ ಕೇವಲ 90, ಮೂಡಿಗೆರೆಯಲ್ಲಿ ದಾಖಲಿಸಿಕೊಂಡಿರುವ 1420 ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಬಂದು ಆಹಾರ ಸ್ವೀಕರಿಸುತ್ತಿರುವವರು ಅನುಕ್ರಮವಾಗಿ 184 ಮತ್ತು 191. ಶೃಂಗೇರಿ ತಾಲೂಕಿನಲ್ಲಿ 526 ರ ಗುರಿಗೆ ಎದುರಾಗಿ ಬಂದು ಆಹಾರ ಸ್ವೀಕರಿಸುತ್ತಿರುವವರು
68 ಮಂದಿ ಗರ್ಭಿಣಿಯರು ಮತ್ತು 53 ಮಂದಿ ಬಾಣಂತಿಯರು.

ಚಿಕ್ಕಮಗಳೂರು ತಾಲೂಕಿನಲ್ಲಿ ಆಹಾರ ಸ್ವೀಕರಿಸಲು ನೋಂದಾಯಿಸಿಕೊಂಡವರ ಸಂಖ್ಯೆ 3302, ಬಂದು ಆಹಾರ ಸ್ವೀಕರಿಸುತ್ತಿರುವ ಗರ್ಭಿಣಿಯರು 822 ಮಂದಿಯಾದರೆ, ಬಾಣಂತಿಯರ ಸಂಖ್ಯೆ 879, ನರಸಿಂಹರಾಜಪುರ ತಾಲೂಕಿನಲ್ಲಿ ಹೆಸರು ದಾಖಲಿಸಿಕೊಂಡ 955 ಮಂದಿಯಲ್ಲಿ ಕೇವಲ 186 ಮಂದಿ ಗರ್ಭಿಣಿಯರು ಹಾಗೂ 189 ಮಂದಿ ಬಾಣಂತಿಯರು ಆಹಾರ ಸ್ವೀಕರಿಸಲು ಬರುತ್ತಿದ್ದಾರೆ.

ಮಲೆನಾಡಿನಲ್ಲಿ ಪೌಷ್ಟಿಕ ಆಹಾರವನ್ನು ಸರ್ಕಾರ ಉಚಿತವಾಗಿ ಒದಗಿಸಿ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಸುಧಾರಿಸಲು ಯೋಜನೆ ಜಾರಿಗೆ ತಂದರೂ, ಅಂಗನವಾಡಿ ಕೇಂದ್ರಕ್ಕೆ ಬಂದು ಆಹಾರ ಸ್ವೀಕರಿಸಲು ಅದರದೇ ಆದ ಭೌಗೋಳಿಕ ಸಮಸ್ಯೆ ಕಾರಣ ಎಂದು ಜನ ಹೇಳುತ್ತಾರೆ.

ಮಲೆನಾಡಿನಲ್ಲಿ ಅಂಗನವಾಡಿ ಕೇಂದ್ರಕ್ಕೂ, ಅಲ್ಲಿರುವ ಮನೆಗಳಿಗೂ ಅಂತರ ಹೆಚ್ಚಾಗಿರುವುದು ಕಾರಣ. ಮಲೆನಾಡಿನಲ್ಲಿ ಬಯಲಿನಂತೆ ಒಟ್ಟಾಗಿ ಮನೆಗಳು ಕಂಡು ಬರುವುದಿಲ್ಲ. ಒಂದು ಮನೆಯಿಂದ ಮತ್ತೊಂದು  ಮನೆಗೆ ಹರಿದಾರಿ ದೂರವಿರುತ್ತದೆ. ಊಟಕ್ಕಾಗಿ ತಿಟ್ಟು ಹತ್ತಿ ಅಂಗನವಾಡಿಗೆ ಬರಲು ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಾರೆ.

ಹಾಗಾಗಿ, ಸರ್ಕಾರದ ಈ ಒಂದು ದೂರದೃಷ್ಟಿಯ ಯೋಜನೆ ಅಲ್ಲಿ ಸಫಲವಾಗುತ್ತಿಲ್ಲ. ಬಯಲು ಭಾಗದಲ್ಲಿ ಒಂದು ಹಳ್ಳಿ ಎಂದರೆ ನೂರಾರು ಮನೆಗಳು ಒಟ್ಟಾಗಿರುತ್ತವೆ. ಜೊತೆಗೆ ಮಲೆನಾಡಿಗಿಂತ ಇಲ್ಲಿ ಬದುಕು ಕಷ್ಟಕರ. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯೂ ಅಧಿಕ. ಆದರೂ ಸಹ ಕಡೂರು, ತರೀಕೆರೆ ತಾಲೂಕಿನಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಕ್ಕೆ ಬರುವವರ ಸಂಖ್ಯಾ ಪ್ರಮಾಣದಲ್ಲೂ ಕುಸಿತ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next