ಚಿಕ್ಕಮಗಳೂರು: ತಂಬಾಕು ಸೇವನೆಯಿಂದ ಸಾವೇ ಹೊರೆತು ಅದೇ ಜೀವನವಲ್ಲ. ಆದ್ದರಿಂದ ತಂಬಾಕು ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಬಸವವರಾಜ್ ಚೇಂಗಟಿ ಹೇಳಿದರು.
ನಗರದ ಟಿಎಂಎಸ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ತಂಬಾಕು ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಆ ದಿನವನ್ನು ಆಚರಣೆ ಮಾಡಬೇಕು. ಹಾಗಾದರೆ ಮಾತ್ರ ತಂಬಾಕು ಸೇವನೆ ನಿಯಂತ್ರಿಸಬಹುದು. ಬೆಂಕಿ ಹಚ್ಚುವ ಕೆಲಸ ಮಾಡದೇ ದೀಪ ಹಚ್ಚುವ ಕೆಲಸವನ್ನು ಮಾಡುವ ಮೂಲಕ ತಂಬಾಕು ತ್ಯಜಿಸಬೇಕು ಎಂದರು. ತಂಬಾಕು ರಹಿತ ದಿನದ ಆಚರಣೆಯನ್ನು 1987ರಿಂದಲೇ ಜಾರಿಗೆ ತಂದಿದ್ದರೂ ಕೂಡ ತಂಬಾಕು ಸೇವನೆ ನಿಯಂತ್ರಣ ಮಾಡುವಲ್ಲಿ ಸರ್ಕಾರ ಇನ್ನೂ ಯಶಸ್ಸು ಕಂಡುಕೊಳ್ಳುತ್ತಿಲ್ಲ. ವಿಶ್ವದ ಅನೇಕ ದೇಶಗಳು ತಂಬಾಕು ಉತ್ಪನ್ನಗಳನ್ನು ಬೆಳೆದು ರಫ್ತು ಮಾಡುತ್ತಿವೆ. ಅದರಲ್ಲಿ ಭಾರತ ಎರಡನೇ ದೇಶವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯುವಜನರಲ್ಲಿ ತಂಬಾಕು ಸೇವನೆ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಯುಜನರಲ್ಲಿ ಇದರ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವಲ್ಲಿ ಸರ್ಕಾರದ ಪಾತ್ರ ಪ್ರಮುಖವಾಗಿದೆ. ತಂಬಾಕು ಸೇವನೆಯನ್ನು ಯುವಜನರು ತ್ಯಜಿಸಿ, ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ಮೂಲಕ ತಂಬಾಕು ಮುಕ್ತ ರಾಷ್ಟ್ರವಾಗಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನಳಿನ ಡಿ.ಸಾ. ಮಾತನಾಡಿ, ಇತ್ತೀಚೆಗೆ ಯುವ ಜನಾಂಗ ಹೆಚ್ಚಾಗಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ. ಆದ್ದರಿಂದ ಸರ್ಕಾರದಿಂದ ಹಲವು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಯುವ ಜನತೆ ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಅರಿವು ಮೂಡಿಸುವುದು ಅಗತ್ಯ ಎಂದರು.
ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಎಂ. ಚಂದ್ರಶೇಖರ್, ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಹಾಗೂ ಜಿಲ್ಲಾ ಆಸ್ಪತ್ರೆಯ ದಂತ ವೈದ್ಯ ಡಾ. ಪ್ರೇಮ್‌ಕುಮಾರ್ ತಂಬಾಕು ಜಗಿಯುವುದರಿಂದ ಬಾಯಿ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು, ಜಿಲ್ಲಾ ಕಾರ್ಯಕ್ರಮಾಧಿಕಾರಿ ಹೆಚ್.ಕೆ. ಮಂಜುನಾಥ, ವಕೀಲ ಚಂದ್ರಶೇಖರ್, ಟಿಎಂಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇಂದ್ರೇಶ್, ಡಾ.ಭರತ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಸುಧಾಕರ್ ನಿರೂಪಿಸಿದರು, ಜಲಜಾಕ್ಷಿ ಸ್ವಾಗತಿಸಿದರು, ಬೇಬಿ ವಂದಿಸಿದರು.