Advertisement

ಹಿರಿಯರಿಗಿತ್ತು ಪರಿಸರ ಕಾಳಜಿ: ಚಟ್ನಳ್ಳಿ

10:40 AM Jun 10, 2019 | Naveen |

ಚಿಕ್ಕಮಗಳೂರು: ಪಂಚಭೂತಗಳ ಆರಾಧನೆಗೆ ಶಾಸ್ತ್ರೀಯ ನಿಯಮಗಳನ್ನು ಪೂರ್ವಿಕರು ನಿರೂಪಿಸುವ ಮೂಲಕ ಪ್ರಕೃತಿಯ ಸಂರಕ್ಷಣೆಯ ಕಾಳಜಿ ತೋರಿದ್ದರೆಂದು ಸಾಹಿತಿ ಚಟ್ನಳ್ಳಿ ಮಹೇಶ್‌ ಹೇಳಿದರು.

Advertisement

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನವು ಮೊರಾರ್ಜಿದೇಸಾಯಿ ವಸತಿ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ತೇಗೂರಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ನಮ್ಮ ಹಿರಿಯರಿಗೆ ಪರಿಸರ ಕಾಳಜಿ ಇತ್ತು. ಪಂಚಭೂತಗಳ ಮೂಲಕ ಪ್ರಕೃತಿಯನ್ನು ಆರಾಧಿಸುತ್ತಾ ಸಂರಕ್ಷಿಸುವ ವಿಧಾನಗಳನ್ನು ಶಾಸ್ತ್ರೀಯ ವಿಧಿವತ್ತಾಗಿ ರೂಪಿಸಿದ್ದರು. ನೀರನ್ನು ಗಂಗೆ ಎಂದು ಪೂಜಿಸಿ ಜಲಮಾಲಿನ್ಯ ಮಾಡದಂತೆ ಎಚ್ಚರಿಸಿದ್ದರು ಎಂದರು.

ಪ್ರತಿ ಊರಮುಂದೆ ಒಂದು ಅರಳಿಮರ ಇರುತ್ತದೆ. ಅರಳಿಮರ ಬ್ರಾಹ್ಮಿಮುಹೂರ್ತದಲ್ಲಿ ಪ್ರದಕ್ಷಣೆ ಹಾಕಬೇಕೆನ್ನುವ ಸಂಪ್ರದಾಯದಲ್ಲೂ ವೈಜ್ಞಾನಿಕತೆ ಇದೆ. ವಾಸ್ತವವಾಗಿ ಅರಳಿಮರ ಆಮ್ಲಜನಕದ ಆಗರ. ಅದರಲ್ಲೂ ಬೆಳಗಿನಜಾವ ಆಮ್ಲಜನಕವನ್ನು ವಿಫುಲವಾಗಿ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.

ದೇವರಕಾಡು ಹೆಸರಿನಲ್ಲಿ ಸೊಪ್ಪುಸೆದೆ, ಹಣ್ಣುಹಂಪಲು, ಗಿಡಮರಗಳನ್ನು ಸಂರಕ್ಷಿಸುವ ಆಶಯವಿತ್ತು. ನಿಸರ್ಗದ ಜೊತೆಗೆ ಸಾಮರಸ್ಯದ ಜೀವನಸೂತ್ರ ಅನುಸರಿಸಬೇಕಿದೆ. ಪ್ರಕೃತಿ ಸಂರಕ್ಷಣೆಗೆ ಪೂರಕವಾದ ಶಿಕ್ಷಣಪದ್ಧತಿಯೂ ನಮ್ಮದಾಗಬೇಕು. ಮರ, ಗಿಡ, ಪ್ರಾಣಿ, ಪಕ್ಷಿ, ಕೀಟ, ಬೆಟ್ಟ, ಗುಡ್ಡ, ಹಳ್ಳ, ತೊರೆ, ನದಿ ಎಲ್ಲವನ್ನೂ ಒಳಗೊಂಡ ಪ್ರಕೃತಿಯನ್ನು ಬೆರಗು-ಕುತೂಹಲದಿಂದ ನೋಡಿದಾಗ ಅದರ ಸೌಂದರ್ಯ ಉಪಯುಕ್ತತೆ ಅರಿವಾಗುತ್ತದೆ ಎಂದರು.

Advertisement

ವೃಕ್ಷ ಕಡಿದರೆ ಭಿಕ್ಷೆ ಬೇಡಬೇಕು. ಮರಬೆಳೆದರೆ ವರ, ಕಡಿದರೆ ಬರ ಎಂಬುದನ್ನು ಮರೆಯುತ್ತಿರುವುದೇ ಇಂದಿನ ಬಹುಪಾಲು ವೈಪರೀತ್ಯಗಳಿಗೆ ಕಾರಣವಾಗಿದೆ. ಸಸ್ಯಗಳದ್ದು ನಿಜಕ್ಕೂ ಸಾರ್ಥಕ ಬದುಕು. ನೂರುವರ್ಷ ಆಳಿದ ರಾಜ ಅಳಿದ ಮೇಲೆ ಮೂರು ದಿನವೂ ಹೆಣವಾಗಿ ಉಳಿಯಲಿಲ್ಲ. ಅದೇ ಮರ ಮತ್ತೆ ನೂರುವರ್ಷ ತೊಲೆಯಾಗಿ ಬಾಳುತ್ತದೆ. ಬದುಕಿನ ಸತ್ಯವನ್ನು ಬೆಳೆಯುವ ಪೀಳಿಗೆಯಲ್ಲಿ ಅರ್ಥಮಾಡಿಸಿ ಸಸ್ಯಸಂಕುಲದ ಸಂವರ್ಧನೆಗೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಷ್ಠೆಗಿಂತ ಪರಿವರ್ತನೆ ನಮ್ಮೆಲ್ಲರ ಕಾಳಜಿಯಾಗಬೇಕು. ಸ್ವಾರ್ಥಪರ ಆಲೋಚನೆಯಿಂದ ಸುತ್ತಲ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ನಮ್ಮ ಸುಖಕ್ಕಾಗಿ ಪ್ರಕೃತಿ ಸಂಪತ್ತು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಪ್ರಕೃತಿ ವ್ಯತ್ಯಯದಿಂದ ಅನೇಕ ದುಷ್ಪಾರಿಣಾಮಗಳನ್ನು ಎದುರಿಸುತ್ತಿದ್ದೇವೆ. ಅದರಲ್ಲಿ ನೀರಿನ ಕೊರತೆಯೂ ಪ್ರಮುಖವಾದದ್ದು. ಸಾಮಾಜಿಕವಾಗಿಯೂ ತೊಂದರೆ ಎದುರಾಗಿದೆ. ಉತ್ತರಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿನ ಕೊರತೆಯಿಂದಾಗಿ ವಿದ್ಯಾರ್ಥಿನಿಲಯಗಳು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಯಾದಗಿರಿ, ಕಲ್ಬುರ್ಗಿಯಂತ ಬೆಂಗಾಡಿನಲ್ಲಿ ಬಸವಳಿದ ಬಡವರು ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸಲು ಹೊಡೆದಾಡುತ್ತಿದ್ದಾರೆ. ಆದರೆ, ನೀರಿಲ್ಲದೆ ಅಲ್ಲೂ ನಿರಾಶೆಯಾಗುತ್ತಿದೆ ಎಂದ ಮಲ್ಲಿಕಾರ್ಜುನ್‌, ಈ ವಿದ್ಯಾರ್ಥಿ ನಿಲಯದಲ್ಲಿರುವ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀರನ್ನು ಹಿತಮಿತವಾಗಿ ಬಳಸಬೇಕು. ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಪೋಷಣೆಯ ಹೊಣೆಹೊತ್ತರೆ ಇಂದಿನ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪರಸರದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸಾಮೂಹಿಕವಾಗಿ ಸಸಿ ನೆಡುವುದರ ಜೊತೆಗೆ ಸಾರ್ವಜನಿಕವಾಗಿಯೂ ಸಸಿನೆಟ್ಟು-ಸಸಿ ವಿತರಿಸಿ ಜಾಗೃತಿಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಪರಿಸರ ಕಾಳಜಿ ಫ್ಯಾಷನ್‌ ಆಗದೆ ಫ್ಯಾಷನ್‌ ಆಗಬೇಕು. ಸರಳಜೀವನ ಉದಾತ್ತಚಿಂತನೆ ನಮ್ಮದಾದರೆ ಪರಿಸರ ಉಳಿಯುತ್ತದೆ ಎಂದರು.

ವಸತಿಕಾಲೇಜು ಪ್ರಾಂಶುಪಾಲ ಯು.ಆರ್‌.ರುದ್ರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಕಡೂರಿನ ಕೃಷ್ಣರಾಮಪ್ಪ, ನಿವೃತ್ತ ಶಿಕ್ಷಕರಾದ ಬಿ.ಆರ್‌. ಕುಮಾರಪ್ಪ ಮತ್ತು ಓಂಕಾರಪ್ಪ ಮುಖ್ಯಅತಿಥಿಗಳಾಗಿದ್ದರು.

ವಿದ್ಯಾರ್ಥಿಗಳಾದ ಪವಿತ್ರಾ ಸ್ವಾಗತಿಸಿದರು. ಸುಜಾತಾ ಜಾಧವ್‌ ಪ್ರಾರ್ಥಿಸಿದರು. ವಿಜಯಲಕ್ಷಿ ್ಮೕ ವಂದಿಸಿದರು. ಶಾಲಿನಿ ಮತ್ತು ಶರಣ್ಯಾ ಪರಿಸರಗೀತೆ ಹಾಡಿದರು. ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ಹೂವಿನ ಸಸಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next