ಚಿಕ್ಕಮಗಳೂರು: ಪಾರಂಪರಿಕ ಜಲಮೂಲಗಳನ್ನು ಸಂರಕ್ಷಿಸಿಕೊಳ್ಳುವ ಯೋಜನೆಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಅಂಕಿ-ಅಂಶಗಳ ಸಲಹೆಗಾರರು ಹಾಗೂ ಜಲಶಕ್ತಿ ಯೋಜನಾ ತಂಡದ ಮುಖ್ಯಸ್ಥ ಜೇಮ್ಸ್ ಮ್ಯಾಥ್ಯು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಲಶಕ್ತಿ ಯೋಜನೆಯ ಅನುಷ್ಠಾನ ಸಭೆಯಲ್ಲಿ ಮಾತನಾಡಿದ ಅವರು, ಜಲಶಕ್ತಿ ಯೋಜನೆಯಡಿ ಜಿಲ್ಲೆಯ ಕಡೂರು ತಾಲೂಕು ಇಡೀ ದೇಶದಲ್ಲಿಯೇ 6ನೇ ಸ್ಥಾನ ಪಡೆದಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು.
ಅಂತರ್ಜಲ ಕುಸಿತದಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಈಗಾಗಲೇ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಕೆರೆಗಳ ಹೂಳೆತ್ತುವ ಕಾರ್ಯ, ಇಂಗು ಗುಂಡಿಗಳ ನಿರ್ಮಾಣ,ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು,ಜಲಾನಯನ ಯೋಜನೆಗಳನ್ನು ನಿರ್ಮಿಸುವ ಯೋಜನೆಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಮಾತನಾಡಿ, ಕಡೂರು ತಾಲೂಕಿನಲ್ಲಿರುವ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಈ ಯೋಜನೆ ಅನುಷ್ಠಾನಗೊಳಿಸಬೇಕು.ಗ್ರಾಮ ಪಂಚಾಯತ್, ಎಲ್ಲಾ ಶಾಲಾ-ಕಾಲೇಜು ಮತ್ತು ನೂತನವಾಗಿ ನಿರ್ಮಿಸುವ ಮನೆಗಳಲ್ಲಿ ಮಳೆ ಕೊಯ್ಲು ಯೋಜನೆ ಅಗತ್ಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಸಹಕರಿಸಿ ಜಲಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಕಡೂರು ತಾಲೂಕಿನಲ್ಲಿ ಅನುಷ್ಠಾನಗೊಳಿ ಸಲಾಗುತ್ತಿರುವ ಜಲಶಕ್ತಿ ಯೋಜನೆಯಲ್ಲಿ ಉದಾಸೀನ ಮಾಡುತ್ತಿರುವ ಕೆಲವು ಇಲಾಖೆ ಅಧಿಕಾರಿಗಳ ಶೂನ್ಯ ಸಾಧನೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದರ ಜೊತೆಗೆ ಸರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಎಸ್.ಅಶ್ವತಿ ಮಾತನಾಡಿ, ಜಲಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಕಡೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಯೋಜನೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಪ್ರತಿ ಗ್ರಾಮದಲ್ಲಿ ನೀರು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಹೆಚ್ಚುವರಿ ಅಭಿಯಂತರ ಸುಶೀಲ್ ಖಜೂರಿಯಾ, ಸಂಶೋಧಕ ಶ್ರೀನಿವಾಸ್ ವಿಠಲ್, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ಡಿ.ಎಫ್.ಒ. ಕುಮಾರ್ ಹಾಗೂ ಅನುಷ್ಠಾನ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.