ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಶ್ರೀರಾಮ ತಾರಕ ಹೋಮ ನಡೆಸಲು ಅವಕಾಶ ನೀಡಿಲ್ಲವೆಂದು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೋಮಕುಂಡವಿಟ್ಟು ಪ್ರತಿಭಟನೆ ನಡೆಸಿದರು.
ಈ ವೇಳೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ನಡೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಕೋಪಕ್ಕೆ ತಿರುಗಿದ ಕಾರ್ಯಕರ್ತರು ದತ್ತಪೀಠಕ್ಕೆ ತೆರಳಿ ಹೋಮ ಹವನ ನಡೆಸುವುದಾಗಿ ಜಿಲ್ಲಾಧಿಕಾರಿ ಆವರಣದಿಂದ ನಡೆದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ.ವಿಕ್ರಮ್ ಅಮಟೆ ಕಾರ್ಯಕರ್ತರ ಮನವೊಲಿಸಲು ಮುಂದಾದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಅಲ್ಲಿಂದ ಹಿಂತಿರುಗಿ ಕೆಲ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಯತ್ನಿಸಿದರು. ಎಚ್ಚೆತ್ತುಕೊಂಡ ಪೊಲೀಸ್ ಸಿಬ್ಬಂದಿ ಕಾರ್ಯಕರ್ತರನ್ನು ಬಂಧಿಸಲು ಮುಂದಾದರು. ಬಂಧನಕ್ಕೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರು ಹೈಡ್ರಾಮಾ ನಡೆಸಿದರು. ಆಟೋ ಶಿವಣ್ಣ ಎಂಬುವರು ರಸ್ತೆಯಲ್ಲೆ ಮಲಗಿ ಬಂಧನವನ್ನು ವಿರೋಧಿಸಿದರು. ಒತ್ತಾಯ ಪೂರ್ವಕವಾಗಿ ಬಂಧಿಸಿದರು.
ದತ್ತಪೀಠ ಸಂವರ್ಧನ ಸಮಿತಿ ಸದಸ್ಯರನ್ನು ಈ ವೇಳೆ ಬಂಧಿಸಿದರು. ಜಿಲ್ಲಾಧಿಕಾರಿ ಆವರಣದಿಂದ ಬಂಧಿಸಿದ ಕಾರ್ಯಕರ್ತರನ್ನು ವಾಹನ ದಲ್ಲಿ ಕರೆದೊಯ್ಯುವ ವೇಳೆ ತೊಗರಿ ಹಂಕಲ್ ಸರ್ಕಲ್ ಬಳಿ ಬಂಧಿಸಿದ ಕಾರ್ಯಕರ್ತರ ವಾಹನವನ್ನು ಉಳಿದ ಹಿಂದೂ ಪರ ಸಂಘಟನೆ ಕಾರ್ಯ ಕರ್ತರು ತಡೆದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿಂದ ಕಾರ್ಯಕರ್ತರನ್ನು ಬಂಧಿಸಿದರು. ಹಿಂದೂ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ಯಿಂದ ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಯಿತು.