Advertisement

ಮಲ್ಲೇಶ್ವರಸ್ವಾಮಿ-ವೀರಭದ್ರೇಶ್ವರಸ್ವಾಮಿ ಕೆಂಡೋತ್ಸವ

05:29 PM May 16, 2019 | Team Udayavani |

ಚಿಕ್ಕಮಗಳೂರು: ತಾಲೂಕಿನ ಮೆಣಸಿನ ಮಲ್ಲೇದೇವರಹಳ್ಳಿಯಲ್ಲಿ ಗ್ರಾಮದೇವತೆ ಶ್ರೀಮಲ್ಲೇಶ್ವರಸ್ವಾಮಿ ಮತ್ತು ಶ್ರೀವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

Advertisement

ಉತ್ಸವದ ಪ್ರಯುಕ್ತ ಶ್ರೀಮಲ್ಲೇಶ್ವರಸ್ವಾಮಿ ಮತ್ತು ಶ್ರೀವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಬೆಳಕು ಹರಿಯುತ್ತಿದ್ದಂತೆ ಗ್ರಾಮದ ಮಠದ ಮನೆ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಅಡ್ಡಪಲ್ಲಕ್ಕಿಯಲ್ಲಿ ಪಾರ್ವತಿ ಪರಮೇಶ್ವರ ಹಾಗೂ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ನಂತರ ಗ್ರಾಮೀಣ ವಾದ್ಯಗಳ ನಡುವೆ ಮಠದ ಅಯ್ಯ ಸಿದ್ದಲಿಂಗೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಅಡ್ಡಪಲ್ಲಕ್ಕಿಯನ್ನು ಚಿಲುಮೆ ಬಾವಿಯ ಬಳಿಗೆ ಕೊಂಡೊಯ್ದು ಗಂಗಾಪೂಜೆ ನೆರವೇರಿಸಲಾಯಿತು. ಬಳಿಕ ಮುಂದುವರೆದ ಮೆರವಣಿಗೆ ಇತಿಹಾಸ ಪ್ರಸಿದ್ಧ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯವನ್ನು ತಲುಪಿತು.

ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಕೆಂಡದ ರಾಶಿಗೆ ಪೂಜೆ ಸಲ್ಲಿಸಿದ ನಂತರ ಮಠದ ಅಯ್ಯನವರು, ಕಳಸ ಹೊತ್ತ ಬಾಲಕಿ, ಮತ್ತು ಅಡ್ಡ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಕ್ರಮವಾಗಿ ಕೆಂಡವನ್ನು ಹಾಯ್ದರು. ಬಳಿಕ ಅದನ್ನು ಹಿಂಬಾಲಿಸಿದ ನೂರಾರು ಭಕ್ತರು ಸಹ ಕೆಂಡ ತುಳಿದರು.

ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಮಧ್ಯಾಹ್ನ ಗ್ರಾಮದಲ್ಲಿ ದುರ್ಗಾದೇವಿ ಪೂಜೆ, ಪಲ್ಲಕ್ಕಿ ಉತ್ಸವ, ಸಂಜೆ ಪಾರ್ವತಿ ಪರಮೇಶ್ವರರ ಕಲ್ಯಾಣೋತ್ಸವ, ಓಕಳಿ ಉತ್ಸವ ನಡೆಸಲಾಯಿತು.

Advertisement

ಉತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಮುಖಂಡರಾದ ಎಂ.ಸಿ.ರುದ್ರಪ್ಪ, ಎಂ.ಉಮೇಶ್‌, ಪಂಚಾಕ್ಷರಿ, ಎಂ.ಬಿ.ಅಶೋಕ್‌ಕುಮಾರ್‌, ಚಂದ್ರಶೇಖರ್‌, ಭದ್ರಪ್ಪ, ಷಡಕ್ಷರಿ, ಚಂದ್ರಶೇಖರ್‌ ಗೇಟಿ, ಪ್ರಶಾಂತ್‌, ತೋಟಪ್ಪ, ರೇವಣ್ಣ, ವೀರಭದ್ರಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next