Advertisement

ಜಿಲ್ಲಾ ಪಂಚಾಯತ್‌ ನಿರ್ಣಯಕ್ಕೆ ಶಿಕ್ಷಕರ ಸಂಘಟನೆಗಳ ವಿರೋಧ

03:15 PM Jul 01, 2019 | Naveen |

ಚಿಕ್ಕಮಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್. ಶರಶ್ಚಂದ್ರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಜಿಲ್ಲಾ ಪಂಚಾಯತ್‌ ಕೈಗೊಂಡಿರುವ ನಿರ್ಣಯವನ್ನು ಶಿಕ್ಷಕರ ಸಂಘಗಳು ವಿರೋಧಿಸಿವೆ.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಅಶ್ವತಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಹಲವು ಶಿಕ್ಷಕರು ಮತ್ತು ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ನಿರ್ಣಯವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿದರು.

ಬಿಇಒ ಒಶರಶ್ಚಂದ್ರ ಅವರು 17-11-2018 ರಂದು ಸರ್ಕಾರಿ ಆದೇಶದ ಪ್ರಕಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದು, 25-03-2019 ರಂದು ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದು, ಸರ್ಕಾರಿ ಆದೇಶದಂತೆ 25-05-2019 ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

2018-19ನೇ ಸಾಲಿನಲ್ಲಿ ಮೂರು ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರೂ ಅವರ ತಂಟೆಗೆ ಹೋಗದ ಕೆಲವರು ಉದ್ದೇಶ ಪೂರ್ವಕವಾಗಿ ಶರಶ್ಚಂದ್ರ ಅವರನ್ನು ಜಿಲ್ಲೆಯಿಂದ ಹೊರ ಹಾಕುವ ದುರುದ್ದೇಶದಿಂದ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆ ಸಂದಭದಲ್ಲೂ ಶರಶ್ಚಂದ್ರ ಅವರ ವಿರುದ್ಧ ದೂರು ನೀಡಿ ಅವರನ್ನು ಜಿಲ್ಲೆಯಿಂದ ಹೊರ ಹಾಕಲಾಗಿತ್ತು. ಆಗ ಅವರ ವಿರುದ್ಧ ಷಡ್ಯಂತ್ರ ನಡೆಸಿದವರೇ ಈಗಲೂ ಸಹ ಪಿತೂರಿ ನಡೆಸಿದ್ದಾರೆ ಎಂದು ದೂರಿದರು.

Advertisement

ಶರಶ್ಚಂದ್ರ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾದ ದಿನದಿಂದ ಇದುವರೆಗೆ ಎಲ್ಲ ಶಿಕ್ಷಕರ ಕೆಲಸ ಕಾರ್ಯ ಮತ್ತು ಸೇವಾ ಸೌಲಭ್ಯಗಳನ್ನು ಕಾನೂನಿನಡಿ ನಿಗದಿತ ಸಮಯದೊಳಗೆ ಮಾಡಿ ಕೊಟ್ಟಿದ್ದಾರೆ. ಯಾವುದೇ ಶಿಕ್ಷಕರಿಗೂ ಕಿರುಕುಳ ನೀಡಿಲ್ಲ. ಯಾವುದೇ ಪಲಾಫೇಕ್ಷೆಯಿಲ್ಲದೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಶಿಕ್ಷಕ ಸಮುದಾಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿರುವ ಅವರನ್ನು ಯಾವುದೇ ಕಾರಣಕ್ಕೂ ರಜೆ ಮೇಲೆ ಕಳುಹಿಸಬಾರದು. ಸತ್ಯಾಸತ್ಯತೆಯನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ ಅವರು, ಶರಶ್ಚಂದ್ರ ಅವರ ವಿರುದ್ದ ಕರ್ತವ್ಯ ಲೋಪ ಎಸಗಿರುವ ಆರೋಪವಿದ್ದು, ಅವರ ಅವಧಿಯಲ್ಲಿ ಲೋಪವಾಗಿಲ್ಲ ಎಂದು ಕಂಡು ಬಂದಲ್ಲಿ ಮರು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎನ್‌. ಸುಂದರೇಶ್‌. ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಂ.ಬಿ. ಚಂದ್ರೇಗೌಡ, ಎಸ್‌. ಸಿದ್ದಮೂರ್ತಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರನಾಯ್ಕ, ಪದೋನ್ನತಿ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಪಿ. ಕೃಷ್ಣೇಗೌಡ, ಕಾರ್ಯದರ್ಶಿ ಸಿ.ಎಸ್‌. ಸುರೇಶ್‌, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬೀರೇಗೌಡ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಳಯ್ಯ, ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಟಿ. ಚಂದ್ರೇಗೌಡ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಆರಾಧ್ಯ, ದುರ್ಗೇಶ್‌ ಹಿತ್ತಲಮನಿ, ಕೆ.ಎಂ. ಮಂಜುನಾಥ್‌, ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next