Advertisement

ನೈಜ ಫಲಾನುಭವಿಗೆ ಸೌಲಭ್ಯ ಕಲ್ಪಿಸಿ

12:19 PM Aug 23, 2019 | Team Udayavani |

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಕಲ್ಪಿಸಬೇಕೆಂದು ತಾಲೂಕು ಪಂಚಾಯತ್‌ ಅಧ್ಯಕ್ಷ ಜಯಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕು ಪಂಚಾಯತ್‌ ಕಚೇರಿಯ ಡಾ| ಬಿ.ಆರ್‌.ಅಂಬೇಡ್ಕರ್‌ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಯ ಶಿರಸ್ತೇದಾರ್‌ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ ಮಳೆಯಿಂದ ಒಟ್ಟು 241 ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಳ್ಳಲು 50 ಸಾವಿರ ರೂ. ಅಥವಾ ಬಾಡಿಗೆ ಮನೆಯಲ್ಲಿರುತ್ತೇವೆ ಎನ್ನುವವರಿಗೆ 10 ತಿಂಗಳ ಅವಧಿಗೆ ಮಾಸಿಕ 5 ಸಾವಿರ ರೂ. ನೀಡಲು ಆದೇಶ ಬಂದಿದೆ. ತಾಲೂಕಿನಲ್ಲಿ 32 ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ರಮೇಶ್‌, ಸಿರಿವಾಸೆ ಗ್ರಾಮದಲ್ಲಿ ಕಳೆದ ವರ್ಷ ಒಬ್ಬರು ತಮ್ಮ ಮನೆಗೆ ಹಾನಿಯಾಗಿದೆ ಎಂದು 42 ಸಾವಿರ ರೂ. ಪರಿಹಾರ ಪಡೆದುಕೊಂಡಿದ್ದರು. ಈ ಬಾರಿ ಪುನಃ ಮನೆ ಬಿದ್ದಿದೆ ಎಂದು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಅವರ ಮನೆಗೆ ಹಾನಿಯೇ ಆಗಿರಲಿಲ್ಲ. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಪರಿಹಾರದ ಹಣ ನೀಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜಯಣ್ಣ, ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳಿಗೆ ವಂಚನೆ ಆಗಬಾರದು. ಅದೇ ರೀತಿ, ಪರಿಹಾರ ನೀಡುವ ಮೊದಲು ಅಧಿಕಾರಿಗಳು ಎಲ್ಲವನ್ನೂ ಸರಿಯಾಗಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಹಣ ದುರುಪಯೋಗವಾಗಬಾರದು ಎಂದು ಹೇಳಿದರು. ತಾಲೂಕು ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳು ಪಹಣಿ ಮತ್ತಿತರೆ ಸೌಲಭ್ಯ ನೀಡಲು ರೈತರಿಗೆ ಸತಾಯಿಸುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ದ್ರಾಕ್ಷಾಯಿಣಿ ದೂರಿದರು. ಇದಕ್ಕೆ ಇನ್ನಿತರ ಸದಸ್ಯರಾದ ಸುರೇಶ್‌, ರಮೇಶ್‌ ಧ್ವನಿಗೂಡಿಸಿದರು. ಆಗ ಉತ್ತರಿಸಿದ ಜಯಣ್ಣ, ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದು, ನಿರ್ಲಕ್ಷ್ಯತನದಿಂದ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಲಾಗುವುದು ಎಂದು ತಿಳಿಸಿದರು.

ಸದಸ್ಯರಾದ ವೈ.ಜಿ.ಸುರೇಶ್‌ ಮತ್ತು ಮಹೇಶ್‌ ಮಾತನಾಡಿ, ನಾವು ತಾ.ಪಂ. ಸದಸ್ಯರಾಗಿ ಮೂರು ವರ್ಷವಾಯಿತು. ಅಲ್ಲಿಂದ ಈವರೆಗೆ ಒತ್ತುವರಿ ಗ್ರಾಮ ಠಾಣಾ ಬಿಡಿಸಿ ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ ಪ್ರಸ್ತಾಪ ಆಗುತ್ತಲೇ ಇದೆ. ಆದರೆ, ಅಧಿಕಾರಿಗಳಿಂದ ಯಾವುದೇ ಕಾರ್ಯ ನಡೆದಿಲ್ಲ ಎಂದರು. ಆಗ ಡಿ.ಜೆ.ಸುರೇಶ್‌ ಮಾತನಾಡಿ, ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಕೂದುವಳ್ಳಿ ಮತ್ತು ವಸ್ತಾರೆಯಲ್ಲಿ ಹತ್ತಾರು ಎಕರೆ ಭೂಮಿ ಗ್ರಾಮ ಠಾಣಾ ಒತ್ತುವರಿಯಾಗಿದೆ. ಆದರೆ, ಈವರೆಗೂ ಬಿಡಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ ಎಂದರು. ಈ ಬಗ್ಗೆ ಮಧ್ಯಾಹ್ನ ನಡೆಯುವ ಸಭೆಗೆ ತಹಶೀಲ್ದಾರ್‌ ಬರಲಿದ್ದಾರೆ. ಆಗ ಚರ್ಚಿಸೋಣ ಎಂದು ಜಯಣ್ಣ ಹೇಳಿದರು.

Advertisement

ಟಿಎಚ್ಒ ಡಾ| ಸೀಮಾ ಮಾತನಾಡಿ, ನಮ್ಮಲ್ಲಿ ಔಷಧಿಯನ್ನು ಆನ್‌ಲೈನ್‌ ಮೂಲಕವೇ ತರಿಸಿಕೊಳ್ಳಲಾಗುತ್ತದೆ. ಆದರೆ, ಕಳೆದ ತಿಂಗಳ ರಾಜ್ಯ ಮಟ್ಟದಲ್ಲಿಯೇ ಸಮಸ್ಯೆ ಆಗಿದ್ದರಿಂದ ಔಷಧಿ ಕೊರತೆ ಆಯಿತು ಎಂದು ಹೇಳಿದರು. ಆಯುಷ್ಮಾನ್‌ ಯೋಜನೆ ಹಗಲು ದರೋಡೆಯಾಗಿದೆ ಎಂದು ಸದಸ್ಯ ಈಶ್ವರಹಳ್ಳಿ ಮಹೇಶ್‌ ಆರೋಪಿಸಿದರು. ಖಾಸಗಿ ವೈದ್ಯರು ರೋಗಿಯಿಂದಲೂ ಹಣ ಕೀಳುತ್ತಾರೆ. ಸರ್ಕಾರದಿಂದಲೂ ಪಡೆಯುತ್ತಿದ್ದಾರೆ ಎಂದು ದೂರಿದರು. ಆಯುಷ್ಮಾನ್‌ ಬಗ್ಗೆ ಜಾಗೃತಿ ಕಾರ್ಯಾಗಾರ ನಡೆಸಬೇಕೆಂದು ಆರೋಗ್ಯ ಅಧಿಕಾರಿಗೆ ಸೂಚಿಸಲಾಯಿತು.

ಕೃಷಿ ಇಲಾಖೆ ತಾಲೂಕು ಅಧಿಕಾರಿ ಉಲ್ಪರ್‌ ಜೈಬಾ ಮಾಹಿತಿ ನೀಡಿ, ತಾಲೂಕಿನಲ್ಲಿ ಮಳೆ ಕೊರತೆಯಿಲ್ಲ. ವಾಡಿಕೆಗಿಂತ ಹೆಚ್ಚು ಬಂದಿದೆ. ಕೆಲ ಹೋಬಳಿಯಲ್ಲಿ ಮಾತ್ರ ಕ್ಷೀಣಿಸಿದೆ ಎಂದರು. ಸದಸ್ಯ ಮಹೇಶ್‌ ಮಾತನಾಡಿ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಶೇ.25 ರಷ್ಟು ಹಣ ಬಂದಿದೆ. ಉಳಿದ ಫಲಾನುಭವಿಗಳಿಗೆ ಹಣ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ಆ ಬಗ್ಗೆ ಮಾಹಿತಿ ತಂದಿಲ್ಲ. ಕೂಡಲೆ ಸಮಗ್ರ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next