Advertisement

ಸಂತ ಜೋಸೆಫರ ಶಿಕ್ಷಣ ಸಂಸ್ಥೆ ಅಧ್ಯಕ್ಷರ ವಿರುದ್ಧ ಕೇಸ್‌

03:35 PM Aug 30, 2019 | Team Udayavani |

ಚಿಕ್ಕಮಗಳೂರು: ಸಂತ ಜೋಸೆಫರ ಎಜುಕೇಷನಲ್ ಸೊಸೈಟಿಗೆ ಸೇರಿದ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಸೊಸೈಟಿ ಅಧ್ಯಕ್ಷ ಬಿಷಪ್‌ ಟಿ.ಆಂತೋನಿ ಸ್ವಾಮಿ ಹಾಗೂ ಸೊಸೈಟಿ ಮಾಜಿ ಉಪಾಧ್ಯಕ್ಷ ಫಾದರ್‌ ಎ.ಶಾಂತರಾಜ್‌ ವಿರುದ್ಧ ನ್ಯಾಯಾಲಯ ಆದೇಶ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸೊಸೈಟಿ ಆಡಳಿತ ಮಂಡಳಿ ಸದಸ್ಯ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಂತ ಜೋಸೆಫರ ಎಜುಕೇಷನಲ್ ಸೊಸೈಟಿಗೆ ಸೇರಿದ ಸಂತ ಜೋಸೆಫರ ಬಾಲಕರ ಪ್ರೌಢಶಾಲೆ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡುವ ಯತ್ನ ನಡೆದಿತ್ತು ಎಂದು ತಿಳಿಸಿದರು.

ನಗರದ ಜ್ಯೋತಿನಗರ ಬಡಾವಣೆಯ ಕೆ.ಎಂ. ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸ್ಥಾಪನೆಗೊಂಡ ಸಂತ ಜೋಸೆಫರ ಬಾಲಕರ ಪ್ರೌಢಶಾಲೆ ಕಟ್ಟಡವಿರುವ ಜಮೀನು ಸುಮಾರು 5 ಎಕರೆ ವಿಸ್ತೀರ್ಣ ಹೊಂದಿದೆ. ಶಾಲೆಯ ಈ ಕಟ್ಟಡ ಪಕ್ಕದ ಕುಪ್ಪೇನಹಳ್ಳಿ ಬಡಾವಣೆಗೆ ಸಾಗುವ ರಸ್ತೆ ಬದಿ ಕೆ.ಎಂ. ರಸ್ತೆ ಪಕ್ಕ 20 ಗುಂಟೆ ನಿವೇಶನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು 1984ರಲ್ಲಿ ಎಫ್‌.ಜಿ.ಎಚ್. ಫೆರ್ನಾಂಡಿಸ್‌ ಎಂಬುವರು ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ದಾನವಾಗಿ ಕೊಟ್ಟಿದ್ದರು. ಈ ನಿವೇಶನದ ಪಕ್ಕದಲ್ಲೇ ಶಾಲೆಯ ಕೌಂಪೌಂಡ್‌ ಒಳಭಾಗದಲ್ಲಿ 20 ಗುಂಟೆ ವಿಸ್ತೀರ್ಣದ ಮತ್ತೂಂದು ನಿವೇಶನವಿದ್ದು, ಈ ಎರಡೂ ನಿವೇಶನಗಳು ಪ್ರತ್ಯೇಕ ಷೆಡ್ಯೂಲ್ ಮತ್ತು ಸರಹದ್ದು ಹೊಂದಿವೆ. ಆಂತೋನಿ ಸ್ವಾಮಿ ಮತ್ತು ಶಾಂತರಾಜ್‌ ಅವರು ಪರಸ್ಪರ ಹೊಂದಾಣಿಕೆಯಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದರು ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಶಾಲೆಗೆ ಸೇರಿದ ಜಾಗ ಉಳಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಾವು ನ್ಯಾಯಾಲಯ ಮೊರೆ ಹೋಗಿದ್ದು, ವಿಚಾರಣೆ ನಡೆಸಿ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು. ಕ್ರೈಸ್ತ ಸಮುದಾಯದ ಮುಖಂಡರಾದ ಸಿಲ್ವಸ್ಟರ್‌ ಸಾಲ್ಡಾನ, ನೆಲ್ಸನ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next