ಚಿಕ್ಕಮಗಳೂರು: ಅನಾರೋಗ್ಯದಿಂದ ಆಸ್ಪತ್ರೆಯೊಳಗಿನ ಬೆಂಚ್ ಮೇಲೆ ಮಲಗಿ ರೋಗಿ ನರಳಾಡುತ್ತಿದ್ದರೂ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸದ ಘಟನೆ ಶೃಂಗೇರಿ ತಾಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ.
ರೋಗಿಯೊಬ್ಬರು ತೀವ್ರ ಜ್ವರ, ವಾಂತಿಯಿಂದ ನರಳುತ್ತಿದ್ದರೂ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಕ್ರೂರವಾಗಿ ನಡೆದುಕೊಂಡ ಘಟನೆ ನಡೆದಿದ್ದು, ಬೆಳಗ್ಗೆಯಿಂದಲೂ ಆಸ್ಪತ್ರೆ ಆವರಣದ ಬೆಂಚ್ ಮೇಲೆ ದಂಪತಿ ಮಲಗಿ ಚಿಕಿತ್ಸೆಗಾಗಿ ಕಾಯುತ್ತಿದ್ದರು.
ಆಸ್ಪತ್ರೆಯಲ್ಲಿ ಬೆಡ್ ಇದ್ದರೂ ರೋಗಿಯನ್ನು ದಾಖಲಿಸದೆ, ತೀವ್ರ ಅನಾರೋಗ್ಯವಿದ್ದರೂ ಆಕೆಗೆ ಚಿಕಿತ್ಸೆ ನೀಡದ ಶೃಂಗೇರಿ ತಾಲೂಕು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದಿಂದ ದಂಪತಿ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆ ಬೆಂಚ್ ಮೇಲೆ ಮಲಗಿ ಮಹಿಳೆ ನರಳಾಡುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಅಥವಾ ವೈದ್ಯರು ಈಕೆಯನ್ನು ತಿರುಗಿಯು ನೋಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತೀವ್ರ ಜ್ವರ-ವಾಂತಿಯಿಂದ ಅಸ್ವಸ್ಥರಾಗಿದ್ದ ಕಮಲ ಎಂಬ ಮಹಿಳೆ ಗಂಡನೊಂದಿಗೆ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರೂ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡಿರಲಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ದಂಪತಿ ಆಸ್ಪತ್ರೆ ಬೆಂಚ್ ಮೇಲೆ ಮಲಗಿ ಮಹಿಳೆ ತೀವ್ರ ನರಳಾಡುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಚಿಕಿತ್ಸೆ ನೀಡದಿರುವುದು ಹಾಗೂ ಮಹಿಳೆಯ ಪರದಾಟ ನೋಡಿ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಸಾರ್ವಜನಿಕರು ಸಿಬ್ಬಂದಿಗೆ ಕ್ಲಾಸ್ ತೆಗದುಕೊಳ್ಳುತ್ತಿದ್ದಂತೆ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡರು.