Advertisement

ವೀರಶೈವ ಧರ್ಮ ಬೃಹತ್‌ ವೃಕ್ಷ‌ವಿದ್ದಂತೆ

12:24 PM Jun 17, 2019 | Naveen |

ಚಿಕ್ಕಮಗಳೂರು: ವೀರಶೈವ ಧರ್ಮ ಬೃಹತ್‌ ವೃಕ್ಷವಿದ್ದಂತೆ. ಇದಕ್ಕೆ ಪಂಚಾಚಾರ್ಯರು ಬೇರುಗಳಾದರೆ, 12ನೇ ಶತಮಾನ ಶರಣರು ಹೂ ಹಣ್ಣುಗಳಿದ್ದಂತೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಹೇಳಿದರು.

Advertisement

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ ಭಾನುವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಮತ್ತು ಶ್ರೀ ಭಕ್ತಿ ಭಂಡಾರಿ ಬಸವೇಶ್ವರರ ಜಯಂತಿ , ಶಿವಲಿಂಗ ಮಹಾಪೂಜೆ ಹಾಗೂ ವೀರಶೈವ ಲಿಂಗಾಯಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಜಗದ್ಗುರು ರೇಣುಕಾಚಾರ್ಯರು ಕೊಲ್ಲಿಪಾಕಿ ಕ್ಷೇತ್ರದಲ್ಲಿ ಮಠಗಳನ್ನು ನಿರ್ಮಿಸಿ ಅಲ್ಲಿ ಭಕ್ತರಿಗೆ ಧರ್ಮ ಬೋಧನೆ ಮಾಡಿ ಸನ್ಮಾರ್ಗದತ್ತ ಕರೆತಂದಿದ್ದಾರೆ. ವೀರಶೈವ ಧರ್ಮ ಸಂವಿಧಾನ ರಚಿಸಿ ಅಲ್ಲಿ ಅಸ್ಪೃಶ್ಯತೆ ನಿವಾರಣೆ ಮತ್ತು ಮಹಿಳಾ ಸ್ವಾತಂತ್ರ್ಯ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ ಎಂದರು.

12ನೇ ಶತಮಾನದ ಬಸವಣ್ಣ ವೀರಶೈವ ಧರ್ಮ ಸ್ವೀಕಾರ ಮಾಡಿ ತಮ್ಮ ಜೀವನ ಸಾರ್ಥಕಪಡಿಸಿಕೊಂಡಿದ್ದರೆ, ಜತೆಗೆ ತಮ್ಮ ಹಿಂದಿದ್ದ ಎಲ್ಲರನ್ನು ಸನ್ಮಾರ್ಗದತ್ತ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇವರೆಲ್ಲ ವೀರಶೈವ ಎಂಬ ವೃಕ್ಷದ ಹೂವು, ಹಣ್ಣುಗಳಿದ್ದಂತೆ. ಪಂಚಾಚಾರ್ಯರು ಬೇರುಗಳು. ಆದರೆ, ಆ ಬೇರುಗಳಿಗೆ ನೀರೆರೆಯದ ಕಾರಣ ಹೂ, ಹಣ್ಣುಗಳನ್ನು ನಾವು ಪಡೆಯಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಅನ್ಯಾಯ ಅಧರ್ಮಕ್ಕೆ 10 ದಾರಿ, ಧರ್ಮ, ಸತ್ಯಕ್ಕೆ ಒಂದೇ ದಾರಿ. ಧರ್ಮದ ಸಂರಕ್ಷಣೆಯಾಗಬೇಕು. ವೀರಶೈವ ಧರ್ಮದ ಆಳ,ಅಗಲ ಅರ್ಥೈಸಿಕೊಂಡು ಧರ್ಮದ ಹಾದಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ರೇಣುಕರು ಸಿದ್ಧಾಂತ ಸಿಖಾಮಣಿಯಲ್ಲಿ ಧರ್ಮದ 10 ಸೂತ್ರಗಳನ್ನು ತಿಳಿಸಿದ್ದಾರೆ. ಅದರಂತೆ ಬದುಕಿ ಬಾಳಿದರೆ ಸುಸಂಸ್ಕೃತ ಸಮಾಜ ನಮ್ಮದಾಗುತ್ತದೆ ಎಂದು ಹೇಳಿದರು.

Advertisement

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಶ್ರೀ ಮಾತನಾಡಿ, ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬಸವಣ್ಣನವರು ಕೂಡ ನುಡಿದಂತೆ ನಡೆದಿದ್ದಾರೆ. ಶ್ರೀ ರೇಣುಕಾಚಾರ್ಯರ ಆಚರಣೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇತ್ತೀಚಿನ ದಿನದಲ್ಲಿ ವೀರಶೈವ ಸಮುದಾಯದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಮರೆಯುತ್ತಿದ್ದಾರೆ. ಇದರಿಂದ ನಮ್ಮ ಧರ್ಮ ಅವಸಾನದ ಅಂಚಿಗೆ ಹೋದರೂ ಆಶ್ಚರ್ಯಪಡಬೇಕಿಲ್ಲ. ಮಹಿಳೆಯರು ಧರ್ಮದ ಬಗ್ಗೆ ಚಿಂತನೆ ಮಾಡಬೇಕು. ಗುರುವನ್ನು ನಡೆಸಿಕೊಳ್ಳುವ ರೀತಿ ಕಲಿಯಬೇಕು. ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ರೇಣುಕರು ಮತ್ತು ಬಸವೇಶ್ವರರು ಎಲ್ಲ ಸಮುದಾಯಕ್ಕೂ ಎರಡು ಕಣ್ಣುಗಳಿದ್ದಂತೆ. ಎರಡೂ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ. ಉತ್ಕೃಷ್ಟ ಸ್ಥಿತಿಯಲ್ಲಿದ್ದ ವೀರಶೈವ ಸಮಾಜ ಇಂದು ಕೆಳಗಿಳಿಯುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಸಮೀಪದ ತೇಗೂರಿನಲ್ಲಿ ಸರ್ಕಾರ ರಂಭಾಪುರಿ ಪೀಠಕ್ಕೆ ನೀಡಿರುವ 10 ಎಕರೆ ಜಾಗದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ್ದು, ದಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ರಂಭಾಪುರಿ ಶ್ರೀಗಳು ವಿತರಿಸಿದರು.

ಬೇರುಗಂಡಿ ಮಠದ ಶ್ರೀ ರೇಣುಕಮಹಂತ ಶಿವಾಚಾರ್ಯಸ್ವಾಮಿಗಳು ಮಾತನಾಡಿದರು. ಟ್ರಸ್ಟಿನ ಕಾರ್ಯದರ್ಶಿ ಸಿ.ಬಿ. ಮಲ್ಲಿಕಾರ್ಜುನ, ಸಹಕಾರ್ಯದರ್ಶಿ ಚಂದ್ರು, ಖಜಾಂಚಿ ಯು.ಎಂ. ಬಸವರಾಜ್‌, ಸದಸ್ಯರಾದ ಟಿ.ಎಂ. ಚಂದ್ರಶೇಖರ್‌, ಎ.ಎಸ್‌. ಸೋಮಶೇಖರಯ್ಯ, ಜೆ.ಬಿ. ಶಿವಪ್ಪಗೌಡ, ಎಚ್.ಎನ್‌. ನಂಜೇಗೌಡ, ಪ್ರಭುಲಿಂಗ ಶಾಸ್ತ್ರಿ ಹಾಜರಿದ್ದರು. ಬಿ.ಎ.ಶಿವಶಂಕರ್‌ ಸ್ವಾಗತಿಸಿದರು. ಬಿ.ಬಿ. ರೇಣುಕಾರ್ಯ ನಿರೂಪಿಸಿದರು. ಬೆಳಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಶಿವದೀಕ್ಷಾ ಸಂಸ್ಕಾರ ಕಾರ್ಯಕ್ರಮ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next