Advertisement

ಸೋಂಬೇರಿ ಅಧಿಕಾರಿಗಳ ವಿರುದ್ಧ ಡಿಸಿ ಗರಂ

06:27 PM Sep 18, 2019 | Team Udayavani |

ಚಿಕ್ಕಮಗಳೂರು: ಸೂಚಿಸಿದ್ದ ಕೆಲಸವನ್ನು ಮಾಡದ ಚಿಕ್ಕಮಗಳೂರು ಹಾಗೂ ತರೀಕೆರೆ ಕಂದಾಯ ಇಲಾಖೆ ಶಿರಸ್ತೇದಾರ್‌ರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕೈಗಾರಿಕಾ ಇಲಾಖೆಯ ಏಕಗವಾಕ್ಷಿ ಸಮಿತಿ ಹಾಗೂ ಕೈಗಾರಿಕಾ ಸ್ಪಂದನ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಶೋಕಾಸ್‌ ನೋಟಿಸ್‌ ಜಾರಿಗೊಳಿಸುವಂತೆ ಸೂಚಿಸಿ, ನೀಡಿದ ಕೆಲಸವನ್ನು 1 ವಾರದೊಳಗಾಗಿ ಮಾಡದಿದ್ದಲ್ಲಿ ಸೇವೆಯಿಂದ ಅಮಾನತು ಮಾಡುವುದಾಗಿ ಎಚ್ಚರಿಸಿದರು.

3 ತಿಂಗಳ ಹಿಂದೆ ನಡೆದಿದ್ದ ಸಮಿತಿ ಸಭೆಯಲ್ಲಿ ಮೆಸ್ಕಾಂ ಉಪವಿಭಾಗ ತೆರೆಯಲು ಚಿಕ್ಕಮಗಳೂರು ತಾಲೂಕಿನ ಗಾಣದಾಳು ಗ್ರಾಮದಲ್ಲಿ ಜಾಗ ಗುರುತಿಸಿ ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿತ್ತು. ಆದರೆ, ಇಂದು ನಡೆದ ಸಭೆಗೆ ಆಗಮಿಸಿದ್ದ ಶಿರಸ್ತೇದಾರರು ಜಾಗ ಗೋಮಾಳ ಆಗಿರುವುದರಿಂದ ಹಸ್ತಾಂತರಿಸಲು ತಾಪಂ ಅನುಮತಿ ಬೇಕಿದೆ. ಹಾಗಾಗಿ, ಅಲ್ಲಿಗೆ ಪತ್ರ ಬರೆಯಲಾಗಿದೆ ಎಂಬ ಉತ್ತರ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗೋಮಾಳ ಹಸ್ತಾಂತರಿಸಲು ಯಾರೂ ಒಪ್ಪುವುದಿಲ್ಲ. ಈ ಬಗ್ಗೆ ಪತ್ರ ಬರೆಯಲು 3 ತಿಂಗಳು ಬೇಕೆ. ಗೋಮಾಳ ಬಿಟ್ಟು ಬೇರೆ ಜಾಗ ಗುರುತಿಸಿದ್ದೀರಾ ಎಂದು ಪ್ರಶ್ನಿಸಿದರು. 1 ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮನ್ನು ಸೇವೆಯಿಂದ ಅಮಾನತು ಮಾಡುವುದಾಗಿ ಎಚ್ಚರಿಸಿದರು.

ತರೀಕೆರೆ ತಾಲೂಕು ತಿಮ್ಮಾಪುರ ಗ್ರಾಮದಲ್ಲಿ ಕೈಗಾರಿಕಾ ವಸಾಹತು ತೆರೆಯಲು ಜಾಗ ಹಸ್ತಾಂತ ರಿಸುವ ಕುರಿತು ಜಿಲ್ಲಾಧಿಕಾರಿಗಳು ಪ್ರಶ್ನಿಸಿದಾಗ, ತರೀಕೆರೆ ಶಿರಸ್ತೇದಾರ್‌ ಪುಟ್ಟಸ್ವಾಮಿ, ತಹಶೀಲ್ದಾ ರರು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಬರೆದ ಪತ್ರ ವನ್ನು ತೋರಿಸಿ ಆ ಜಾಗ ಅರಣ್ಯ ಪ್ರದೇಶದಂತೆಕಂಡು ಬರುತ್ತಿದೆ. ಆದ್ದರಿಂದ ಅದನ್ನು ಕೊಡಲು ಸಾಧ್ಯವಿಲ್ಲವೆಂದು ತಿಳಿಸಿದರು.

Advertisement

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಮಾತನಾಡಿ, ಸದರಿ ಪ್ರದೇಶದಲ್ಲಿ 350 ಎಕರೆ ಅರಣ್ಯ ಪ್ರದೇಶವಿದ್ದು, ಅದರೊಂದಿಗೆ 99 ಎಕರೆ ಜಾಗ ಸರ್ಕಾರಕ್ಕೆ ಸೇರಿದ್ದಾಗಿದೆ ಎಂದು ಪಹಣಿ ತೋರಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ಪಹಣಿಯಲ್ಲಿಯೇ ಸರ್ಕಾರಿ ಜಾಗ ಎಂದಿದೆ. ಅದನ್ನು ನೀವೇಕೆ ಅರಣ್ಯ ಪ್ರದೇಶವೆಂದು ಹೇಳುತ್ತೀರಿ. ಕೂಡಲೆ ಇಬ್ಬರಿಗೂ ಶೋಕಾಸ್‌ ನೋಟಿಸ್‌ ನೀಡಿ, ಅದರ ಪ್ರತಿಯನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಕಳುಹಿಸಬೇಕೆಂದು ಅಪರ ಡಿಸಿಗೆ ಸೂಚಿಸಿದರು.

ಲಕ್ಯಾ ಹೋಬಳಿಯ ಹಳೆಲಕ್ಯಾ ಗ್ರಾಮದ ಸ.ನಂ. 124ರಲ್ಲಿ ಆಟೋಮೊಬೈಲ್ ಕಾಂಪ್ಲೆಕ್ಸ್‌ ತೆರೆಯಲು 6.05 ಎಕರೆ ಜಾಗವನ್ನು ಕೆಎಸ್‌ಎಸ್‌ಐ ಡಿಸಿಗೆ ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸಲಾಗಿ ದೆಯೇ ಎಂದು ಪ್ರಶ್ನಿಸಿದಾಗ, ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದ್ದು, ಈಗ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿದೆ ಎಂದು ಚಿಕ್ಕಮಗಳೂರು ಶಿರಸ್ತೇ ದಾರ್‌ ತಿಳಿಸಿದರು. ಕೂಡಲೆ ಉಪವಿಭಾಗಾಧಿಕಾರಿಗೆ ದೂರವಾಣಿ ಕರೆ ಮಾಡಿದ ಜಿಲ್ಲಾಧಿಕಾರಿ, ಪ್ರಸ್ತಾವನೆಯನ್ನು ಪರಿಶೀಲಿಸಿ ತಮಗೆ ಕೂಡಲೆ ಕಳುಹಿಸಬೇಕೆಂದು ಡಿಸಿ ಸೂಚಿಸಿದರು.

ಕಡೂರು ತಾಲೂಕು ಕಬ್ಬಳಿ ಗ್ರಾಮದಲ್ಲಿ ಕೈಗಾರಿಕಾ ವಸಾಹತು ತೆರೆಯುವ ಪ್ರಸ್ತಾವನೆ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಅಪರ ಜಿಲ್ಲಾಧಿಕಾರಿ ಡಾ|ಕುಮಾರ್‌, ಗ್ರಾಮದ ಸ.ನಂ. 46ರಲ್ಲಿ 32-27 ಎಕರೆ ಜಾಗವಿದೆ. ದಾಖಲೆಗಳ ಪ್ರಕಾರ ಪಹಣಿಯಲ್ಲಿ ನೆಡುತೋಪು ಎಂದು ನಮೂದಾಗಿದೆ. ಆದರೂ, ಮುಂದೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅರಣ್ಯ ಇಲಾಖೆಗೆ ಎನ್‌ಓಸಿ ನೀಡಲು ಪತ್ರ ಬರೆಯಲಾಗಿದೆ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ದೂರವಾಣಿ ಕರೆ ಮಾಡಿದ ಡಿಸಿ, ಕೂಡಲೆ ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ವಿಜಯ್‌ಕುಮಾರ್‌, ಸದಸ್ಯ ಮಹೇಂದ್ರ, ಚೇಂಬರ್‌ ಆಫ್‌ ಕಾಮರ್ಸ್‌ನ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next