ಚಿಕ್ಕಮಗಳೂರು: ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಜೀವನದಲ್ಲಿ ಸಾಧನೆ ಮಾಡಿದಾಗ ಗುರು ಹಿರಿಯರಿಗೆ ಮತ್ತು ಪೋಷಕರಿಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಶೃಂಗೇರಿ ಜೆ.ಸಿ.ಐ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಶೃಂಗೇರಿ ಜೆ.ಸಿ.ಐ ವತಿಯಿಂದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸತಿ ನಿಲಯದ ವಿದ್ಯಾರ್ಥಿಗಳು ಅತ್ಯಂತ ಶ್ರಮಪಟ್ಟು ವಿದ್ಯಾರ್ಜನೆ ಮಾಡಿ ಉನ್ನತ ಹುದ್ದೆಗಳನ್ನು ಪಡೆದಾಗ ನಿಮ್ಮ ಸಾಧನೆ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುತ್ತದೆ ಎಂದರು.
ಶೃಂಗೇರಿ ಜೆ.ಸಿ.ಐ ವತಿಯಿಂದ ಜಿಲ್ಲಾದ್ಯಂತ ವಿದ್ಯಾರ್ಥಿಗಳಿಗೆ 101 ಕಾರ್ಯಕ್ರಮಗಳನ್ನು ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. 5 ತರಬೇತಿ ಕಾರ್ಯಕ್ರಮಗಳು ಮುಗಿದಿವೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಧನೆ ಮಾಡುವ ಸಾಮಥ್ಯವಿರುತ್ತದೆ. ನಿಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಹತ್ತನೇ ತರಗತಿ ಓದಿದ ನಾನು ಗಾರೆ ಕೆಲಸ ಮಾಡುತ್ತಿದ್ದೆ. ಎಲ್ಲಿಯಾದರು ಸಭೆ ಸಮಾರಂಭ ನೆಡೆಯುವಾಗ ಭಾಷಣಕಾರರನ್ನು ನೋಡಿ ನಾನು ಸಮಾಜ ಸೇವೆ ಮಾಡಬೇಕು ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂದುಕೊಂಡು ನನ್ನಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕಥೆ, ಕವನ, ಪುಸ್ತಕಗಳನ್ನು ಬರೆಯುತ್ತಿದ್ದೇನೆ. ಜೆ.ಸಿ.ಐ ಅಧ್ಯಕ್ಷನಾಗಿ ಸಮಾಜಮುಖೀ ಕೆಲಸಗಳನ್ನು ಮಾಡುತ್ತಿದ್ದೇನೆ.
ನನಗಿಂತ ಹೆಚ್ಚಾಗಿ ಓದಿರುವ ನೀವುಗಳು ಸಾಧನೆ ಮಾಡಲು ಅನೇಕ ಅವಕಾಶಗಳಿವೆ ಎಂದ ಅವರು, ಸಾಧನೆ ಮಾಡದೇ ಯಾರೂ ಯಶಸ್ಸಿನ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದರು. ರಾಷ್ಟ್ರೀಯ ತರಬೇತಿದಾರ ಜೆ.ಸಿ ವಿಜಯ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿ ಕನಸು ಕಾಣುತ್ತಾ ಇಂದು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸಹ ಕನಸುಗಳನ್ನು ಕಾಣಬೇಕು ಆ ಕನಸಿಗೆ ಪೂರಕವಾಗಿ ಶ್ರಮಪಟ್ಟು ವಿದ್ಯಾರ್ಜನೆ ಮಾಡಬೇಕು ಎಂದ ಅವರು, ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ. ನೀವು ನಿಮ್ಮ ಜೀವನ ರೂಪಿಸಿಕೊಳ್ಳಲು ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸ್ವ ಉದ್ಯೋಗ ಪ್ರಾರಂಭಿಸಿ ಎಂದು ಕಿವಿಮಾತು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎ.ಚೆನ್ನಪ್ಪ ಮಾತನಾಡಿ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳಿಂದ ಅತ್ಯಂತ ಉಪಯುಕ್ತವಾಗಿದ್ದು, ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಅಭ್ಯಾಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿ ಕಾರಿ ಎಸ್.ಆರ್.ಬಡಿಗೇರ್, ಜೆ.ಸಿ.ಐ ಘಟಕದ ತರಬೇತಿ ವಿಭಾಗದ ಉಪಾಧ್ಯಕ್ಷರಾದ ಸೃಜನ್, ಜೆ.ಸಿ.ಐ ಸದಸ್ಯರಾದ ರಘುನಂದನ್, ಪ್ರಸಾದ್‌ಕುಮಾರ್, ಚೈತ್ರ, ಅನಿಲ್ ಆನಂದ್, ವಿಜಯ್‌ಕುಮಾರ್, ಸುರೇಶ್, ಕಾವ್ಯಪ್ರಸಾದ್ ಉಪಸ್ಥಿತರಿದ್ದರು. ಸಂದೇಶ್ ಸ್ವಾಗತಿಸಿದರು. ತಿಮ್ಮಪ್ಪ ನಿರೂಪಿಸಿದರು. ಪ್ರಶಾಂತ್ ವಂದಿಸಿದರು.