ಚಿಕ್ಕಮಗಳೂರು: ಜೂ.18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಪಪೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು ಜಿಲ್ಲೆಯಲ್ಲಿ 9,986 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಚಿಕ್ಕಮಗಳೂರು ನಗರದಲ್ಲಿ- 5, ಕಡೂರು ಪಟ್ಟಣದಲ್ಲಿ- 2, ಬೀರೂರು ಪಟ್ಟಣದಲ್ಲಿ-1, ಕಡೂರು ತಾಲೂಕು ದೇವನೂರಿನಲ್ಲಿ-1, ಅಜ್ಜಂಪುರ-1, ತರೀಕೆರೆ ಪಟ್ಟಣದಲ್ಲಿ-2, ಎನ್.ಆರ್. ಪುರ-1, ಕೊಪ್ಪ ಪಟ್ಟಣದಲ್ಲಿ-1, ಶೃಂಗೇರಿ-1, ಬಾಳೆಹೊನ್ನೂರು-1, ಕಳಸ-1, ಮೂಡಿಗೆರೆಯಲ್ಲಿ-1 ಕೇಂದ್ರಗಳನ್ನು ತೆರೆಯಲಾಗಿದೆ.
18 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9,986 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 1,300 ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಪೈಕಿ ದಕ್ಷಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಜಿಲ್ಲೆಯ 112 ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ತೆರೆಯಲಾಗಿರುವ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಹಾಗೂ ರಾಸಾಯನಿಕ ಬಳಸಿ ಶುಚಿಗೊಳಿಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಅವರು ಕೈಗಳನ್ನು ಶುದ್ಧೀಕರಿಸಿಕೊಳ್ಳಲು ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಹಾಗೂ ಸೋಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಿದ ನಂತರವೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳ ಪ್ರವೇಶಿಸಲು ಅವಕಾಶ ನೀಡಲಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ ಚರ್ಚಿಸಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು 600ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದ್ದು, ಕೊಠಡಿಗಳು ಚಿಕ್ಕದಿದ್ದರೆ 16 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಒಂದು ಡೆಸ್ಕ್ನಿಂದ ಮತ್ತೂಂದು ಡೆಸ್ಕ್ಗೆ ಒಂದೂವರೆ ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಮಾಸ್ಕ್ ಮರೆತು ಪರೀಕ್ಷಾ ಕೇಂದ್ರಕ್ಕೆ ಬಂದಲ್ಲಿ ಅವರಿಗೆ ಮಾಸ್ಕ್ ನೀಡಲು ಮಾಸ್ಕ್ಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಸ್ಯಾನಿಟೈಸರ್ ಸಂಗ್ರಹಿಸಿಟ್ಟುಕೊಳ್ಳಲಾಗಿದೆ.
ದೂರದ ಹಾಗೂ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಕೆಎಸ್‌ಆರ್‌ಟಿಸಿ ರೂಟ್ ಬಸ್ ಹಾಗೂ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ತಮಗೆ ಯಾವುದು ಅನುಕೂಲವೋ ಅದನ್ನು ಬಳಸಿಕೊಳ್ಳಬಹುದಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರಲು ಬಹಳಷ್ಟು ತೊಂದರೆಯಿರುವ ಕಮ್ಮರಡಿಯಿಂದ ಕೊಪ್ಪ ಹಾಗೂ ಕಮ್ಮರಡಿಯಿಂದ ಶೃಂಗೇರಿಗೆ ಖಾಸಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೊರೊನಾ ಆತಂಕದ ನಡುವೆ ದೇಶವೇ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸಲು ಕಾಫಿ ನಾಡು ಸಕಲ ಸಿದ್ಧತೆ ಮಾಡಿಕೊಂಡಿದೆ.
ಪಿಯುಸಿ ಪರೀಕ್ಷೆ; ನಿಷೇಧಾಜ್ಞೆ ಚಿಕ್ಕಮಗಳೂರು: 2020ನೇ ಸಾಲಿನ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜಿಲ್ಲೆಯ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಜೂ.18 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಪರೀಕ್ಷೆ ವೇಳೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್ ಆದೇಶಿಸಿದ್ದಾರೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಸರ್ಕಾರ ನಿರ್ದೇಶನದಂತೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಥರ್ಮಲ್ ಸ್ಕ್ಯಾನಿಂಗ್ ನಡೆಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡಲಾಗುವುದು. ಪರೀಕ್ಷಾ ದಿನ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಮುಂಚಿತವಾಗಿ ಬರಬೇಕು. ಸ್ಯಾನಿಟೈಸರ್‌ನಿಂದ ಕೈಗಳನ್ನು ಶುದ್ಧೀಕರಿಸಿಕೊಂಡು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಬೇಕು.
ಕೆ. ನಾಗರಾಜ್,
ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ