Advertisement

ನೀರಿಗೆ ತತ್ವಾರ-ಜನ ಜಾನುವಾರು ತತ್ತರ

12:05 PM May 17, 2019 | Naveen |

ಚಿಕ್ಕಮಗಳೂರು: ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಕಡೂರು ತಾಲೂಕನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಲಾಗಿತ್ತು. ಹಿಂಗಾರು ಹಂಗಾಮಿನಲ್ಲಿ ಶೃಂಗೇರಿ ತಾಲೂಕನ್ನು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಯಿತು.

Advertisement

ಬರಪೀಡಿತ ಪ್ರದೇಶಗಳ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಖಾತೆಗೆ ರಾಜ್ಯ ಸರ್ಕಾರ 7 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ಕುಡಿಯುವ ನೀರಿನ ಕಾಮಗಾರಿಗಳಿಗೆಂದು ಜಿಲ್ಲಾ ಪಂಚಾಯತ್‌ ಟಾಸ್ಕ್ಫೋರ್ಸ್‌ಗೆ ಈವರೆಗೂ 6 ಕೋಟಿ ರೂ. ಬಿಡುಗಡೆ ಮಾಡಿದೆ.

ಜಿಲ್ಲಾ ಪಂಚಾಯತ್‌ ಟಾಸ್ಕ್ಪೋರ್ಸ್‌ಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಈವರೆಗೂ 261 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 213 ಕಾಮಗಾರಿಗಳು ಪೂರ್ಣಗೊಂಡಿದೆ. ಈ ಪೈಕಿ, ಹೊಸದಾಗಿ ಬೋರ್‌ವೆಲ್ಗಳನ್ನು ಕೊರೆಯುವುದು, ಕೆಟ್ಟ ಬೋರ್‌ವೆಲ್ಗಳನ್ನು ದುರಸ್ತಿಪಡಿಸುವುದು, ಪೈಪ್‌ಲೈನ್‌ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬರಪೀಡಿತ ಪ್ರದೇಶವೆಂದು ಘೋಷಣೆಯಾದ ನಂತರ ಕಡೂರು ತಾಲೂಕಿನಲ್ಲಿ ಹೊಸದಾಗಿ 58 ಬೋರ್‌ವೆಲ್ಗಳನ್ನು ಕೊರೆಸಲಾಗಿದೆ. ಈ ಪೈಕಿ 6 ಬೋರ್‌ವೆಲ್ನಲ್ಲಿ ನೀರು ಬಂದಿಲ್ಲ. ಚಿಕ್ಕಮಗಳೂರು ತಾಲೂಕಿನಲ್ಲಿ 36 ಬೋರ್‌ವೆಲ್ ಕೊರೆಸಲಾಗಿದ್ದು, ಎರಡರಲ್ಲಿ ನೀರು ಬಂದಿಲ್ಲ. ನೀರು ಬಂದಿರುವ ಬೋರ್‌ವೆಲ್ಗಳಲ್ಲಿಯೂ ಕಡಿಮೆ ಪ್ರಮಾಣದಲ್ಲಿ ನೀರು ದೊರೆತಿದೆ. ಅದು ಕೇವಲ 15-20 ದಿನಗಳಿಗೆ ಮಾತ್ರ ಸಾಕಾಗುತ್ತಿದೆ.

ಇಷ್ಟು ಮಾತ್ರವಲ್ಲದೆ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸರ್ಕಾರ 1.45 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕೈಗೊಳ್ಳಬೇಕಾಗಿರುವ 39 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಈಗಾಗಲೇ ಟೆಂಡರ್‌ ಕರೆಯಲಾಗಿದೆ.

68 ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಕೆ:ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ 68 ಗ್ರಾಮಗಳಿಗೆ ಈಗ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕಡೂರು ತಾಲೂಕಿನ 42, ಚಿಕ್ಕಮಗಳೂರು ತಾಲೂಕಿನ 25 ಹಾಗೂ ತರೀಕೆರೆ ತಾಲೂಕಿನ 1 ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಡೂರು ತಾಲೂಕಿನ 74, ಚಿಕ್ಕಮಗಳೂರು ತಾಲೂಕಿನ 24 ಹಾಗೂ ತರೀಕೆರೆ ತಾಲೂಕಿನ 16 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.

Advertisement

ಕಡೂರು ತಾಲೂಕು ಮತ್ತು ಚಿಕ್ಕಮಗಳೂರು ತಾಲೂಕಿನ ಲಕ್ಯಾ ಮತ್ತು ಅಂಬಳೆ ಹೋಬಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಗ್ರಾಮಗಳಲ್ಲಿ 800-900 ಅಡಿಗಳಷ್ಟು ಕೊರೆದರೂ ನೀರು ದೊರೆಯುತ್ತಿಲ್ಲ. ನೀರು ದೊರೆತರೂ ಅದು ಕೆಲವು ದಿನಗಳಿಗೆ ಮಾತ್ರ ಲಭ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದರಿಂದ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುದು ಜನತೆಯ ಅಭಿಪ್ರಾಯವಾಗಿದೆ.

ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಈ ಹಿಂದೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಾಬ್ತು ಬಿಲ್ ಪಾವತಿಸುವುದು ತಡವಾಗುತ್ತಿತ್ತು. ಈಗ 15 ದಿನಗಳಿಗೊಮ್ಮೆ ಬಿಲ್ ಪಾವತಿಸಲಾಗುತ್ತಿದೆ. ಏಪ್ರಿಲ್ 15ರ ವರೆಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಿಲ್ಗಳನ್ನು ಪಾವತಿಸಲಾಗಿದೆ. ಏಪ್ರಿಲ್ 30ರ ವರೆಗಿನ ಬಿಲ್ ಅನ್ನು ಇನ್ನು 2-3 ದಿನಗಳಲ್ಲಿ ಪಾವತಿಸಲಾಗುವುದು.
ಡಾ| ಬಗಾದಿ ಗೌತಮ್‌,
ಜಿಲ್ಲಾಧಿಕಾರಿ, ಚಿಕ್ಕಮಗಳೂರು.

ಎಸ್‌.ಕೆ. ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next