Advertisement
ಈ ಕುರಿತು ಹೇಳಿಕೆ ನೀಡಿರುವ ಭದ್ರಾ ವೈಲ್ಡ್ಲೈಫ್ ಕನ್ಸರ್‌ವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ವೈಲ್ಡ್ ಕ್ಯಾಟ್ ಸಿಯ ಶ್ರೀದೇವ್ ಹುಲಿಕೆರೆ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್, ಪಶ್ಚಿಮಘಟ್ಟ ಶ್ರೇಣಿಗಳ ಮಳೆಕಾಡು, ಶೋಲಾಕಾಡುಗಳಲ್ಲಿ ಹುಟ್ಟುವ ರಾಜ್ಯದ ಪ್ರಮುಖ ನದಿಗಳು ಇಂದು ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದೆ. ನೀರಿನ ಸಮಸ್ಯೆ ಈ ನದಿ ಪಾತ್ರದ ಹಳ್ಳಿ ಹಾಗೂ ಪಟ್ಟಣಗಳಲ್ಲಿ ತೀವ್ರವಾಗುತ್ತಿದ್ದರೆ, ಈ ನದಿಗಳ ದಡದಲ್ಲಿರುವ ಧಾರ್ಮಿಕ ಕ್ಷೇತ್ರಗಳಲ್ಲೂ ನೀರಿನ ಅಭಾವ ಎದುರಾಗಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಹಿಂದೆ ಶಿಶಿಲಾ-ಭೈರಾಪುರ ರಸ್ತೆ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಬೆಂಬಲಿಸಿ ಸರ್ಕಾರವನ್ನು ಒತ್ತಾಯಿಸಿದ್ದರು. ಧರ್ಮಸ್ಥಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈ ರಸ್ತೆ ಅಗತ್ಯವಿದೆ ಎಂದು ಪತ್ರ ಬರೆದಿದ್ದರು. ಈಗಾಗಲೇ ನೇತ್ರಾವತಿ ನದಿಯಲ್ಲಿ ನೀರಿಲ್ಲ. ಇನ್ನು ಶಿಶಿಲಾ-ಭೈರಾಪುರ ಮಾರ್ಗವಾಗಿ ಚಥುಷ್ಪಥ ಹೆದ್ದಾರಿ ನಿರ್ಮಿಸಿದರೆ ಈ ನದಿ ಉಳಿಯುವುದೇ ಎಂಬುದನ್ನು ಯೋಚಿಸಬೇಕಾಗಿದೆ ಎಂದಿದ್ದಾರೆ.
ಚಥುಷ್ಪಥ ಹೆದ್ದಾರಿ ಇಲ್ಲದಿದ್ದರೂ ಮಾನವ ಬದುಕಬಲ್ಲ, ಆದರೆ ಕುಡಿಯಲು ನೀರಿಲ್ಲದಿದ್ದರೆ ಮತ್ತು ಕೃಷಿ ಚಟುವಟಿಕೆ ನಡೆಸಲು ನೀರು ಸಿಗದಿದ್ದರೆ ಮನುಷ್ಯ ಬದುಕಲಾರ. ನದಿ ತಟಗಳಲ್ಲಿರುವ ಧಾರ್ಮಿಕ ಕ್ಷೇತ್ರಗಳೂ ನದಿ ಹಾಳಾದಲ್ಲಿ ತಮ್ಮ ಪಾವಿತ್ರತೆಯನ್ನು ಕಳೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ನದಿ ಉಳಿಯ ಬೇಕಾದರೆ, ಅದು ಹುಟ್ಟುವ ಗುಡ್ಡಗಾಡು ಪ್ರದೇಶಗಳು ದಟ್ಟ ಹಸುರಿನಿಂದ ಕೂಡಿರಬೇಕು. ಮಳೆಗಾಲದಲ್ಲಿ ನೀರನ್ನು ತುಂಬಿಕೊಳ್ಳಲು ದಟ್ಟ ಕಾನನಗಳು ಅತ್ಯಂತ ಪೂರಕ ಹಾಗೂ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರಾವಳಿಯ ಜೀವನದಿಯಾದ ನೇತ್ರಾವತಿ ಉಳಿಸಿಕೊಳ್ಳಲು ಧರ್ಮಾಧಿಕಾರಿಗಳು ಶಿಶಿಲಾ-ಭೈರಾಪುರವನ್ನು ಹಾದು ಹೋಗುವ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡ ಬಾರದೆಂದು ಮನವಿ ಮಾಡಿದ್ದಾರೆ. ಪಶ್ಚಿಮಘಟ್ಟಗಳಲ್ಲಿ ಬೃಹತ್ ಯೋಜನೆಗಳ ಅನುಷ್ಠಾನದಿಂದಾಗಿ ನದಿಗಳ ಮೂಲಕ್ಕೆ ಮತ್ತು ನದಿಗಳ ಹರಿವಿಗೆ ಹಾಗೂ ಆ ನದಿಗಳ ಪಾತ್ರ ಹೆಚ್ಚಿಸುವ ಹಳ್ಳಕೊಳ್ಳಗಳ ಮೂಲಗಳಿಗೆ ಭಾರೀ ಅಪಾಯವುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರು ಎಚ್ಚೆತ್ತುಕೊಂಡು ಇಂತಹ ಪರಿಸರ ನಾಶಕ್ಕೆ ಪೂರಕವಾದ ಯೋಜನೆಗಳನ್ನು ಬೆಂಬಲಿಸಬಾರದೆಂದು ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನೇತ್ರಾವತಿ ನದಿಗೆ ಹೋಗಿ ಸೇರುವ ಶಿಶಿಲಾ-ಭೈರಾಪುರದಲ್ಲಿ ಹುಟ್ಟುವ ಕಪಿಲಾ ಸೇರಿದಂತೆ ಹಲವು ಹಳ್ಳಗಳು ಬಿರು ಬೇಸಿಗೆಗೆ ಸಾಕಷ್ಟು ಒಣಗಿವೆ. ಮುಂದಿನ ದಿನಗಳಲ್ಲಿ ಶಿಶಿಲಾ-ಭೈರಾಪುರದ ಮಾರ್ಗವಾಗಿ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡುವ ಯೋಜನೆ ಕಾರ್ಯಗತಗೊಳಿಸಿದಲ್ಲಿ ನೇತ್ರಾವತಿ ನದಿ ತನ್ನ ನೀರಿನ ಹರಿವನ್ನು ಮಳೆಗಾಲ ಮುಗಿದಾಕ್ಷಣ ಕ್ಷೀಣಗೊಳಿಸಿಕೊಳ್ಳುತ್ತದೆ.