Advertisement
ಭಾನುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು, ಅನೇಕ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಭಯೋತ್ಪಾದನೆ, ಕೋಮುದಳ್ಳುರಿ, ಮತ-ಧರ್ಮಗಳ ಮಧ್ಯೆ ಬಿರುಕು ಇಂತಹ ಘಟನೆಗಳು ನಡೆಯುತ್ತಿದ್ದು, ದೇಶದ ಸಾರ್ವಭೌಮತೆಗೆ ಧಕ್ಕೆ ಇಂತಹ ಸಮಸ್ಯೆಗಳನ್ನು ನಾವೆಲ್ಲರೂ ಹತ್ತಿಕ್ಕಬೇಕಾಗಿದೆ ಎಂದರು.
Related Articles
Advertisement
ಕಳೆದ ವರ್ಷ ಸುರಿದ ಬಾರಿ ಮಳೆಯಿಂದ ಆದ ಹಾನಿಯನ್ನು ಸರಿಪಡಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಿದೆ. ಹಾನಿಗೊಂಡ ಮನೆಗಳಿಗೆ ಈಗಾಗಲೇ ರೂ.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರವಾಹದಿಂದ ಸಂಭವಿಸಿದ ಹಾನಿ ಸರಿಪಡಿಸಲು ಮತ್ತು ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಈಗಾಗಲೇ ಜಿಲ್ಲೆಗೆ ವಿವಿಧ ಹಂತಗಳಲ್ಲಿ ರೂ.212 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಗಮನ ನೀಡಲಾಗಿದ್ದು, ವಿವಿಧ ಯೋಜನೆಗಳಿಗೆ ರೂ.148 ಕೋಟಿ ಮೀಸಲಿರಿಸಲಾಗಿದೆ. ಜಿಲ್ಲೆಯ ಜನರ ಬಹುದಿನದ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಒಟ್ಟು ರೂ.325 ಕೋಟಿ ಅನುದಾನದಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ರೂ. 170 ಕೋಟಿ ಅನುದಾನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಬಹು ಸಂಸ್ಕೃತಿ ಬಿಂಬಿಸುವ ಜಿಲ್ಲಾ ಉತ್ಸವ ಮತ್ತು ಜನಪದ ಜಾತ್ರೆಗಳನ್ನು ಫೆಬ್ರವರಿ 28, 29 ಮತ್ತು ಮಾರ್ಚ್ 1 ಈ ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ಮೂಲ ಸೌಕರ್ಯ ಕಲ್ಪಿಸಲು ರೂ. 21 ಕೋಟಿ ಅನುದಾನ ಒದಗಿಸಿಕೊಳ್ಳಲಾಗಿದೆ. ರೂ.25 ಕೋಟಿ ವೆಚ್ಚದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಮಹಿಳಾ ಪೊಲೀಸ್, ಮಾಜಿ ಸೈನಿಕರು, ಗೃಹರಕ್ಷಕ ದಳ ಹಾಗೂ ವಿವಿಧ ಶಾಲೆಯ ಮಕ್ಕಳು ನಡೆಸಿಕೊಟ್ಟ ಪೇರಡ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ನೂರಾರು ಮಕ್ಕಳು ದೇಶ ಭಕ್ತಿಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ತಾಪಂ ಅಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಜಿಪಂ ಸಿಇಒ ಎಸ್. ಅಶ್ವಿಥಿ, ಎಸ್‌ಪಿ ಹರೀಶ್ ಪಾಂಡೆ, ಜಿಪಂ, ತಾಪಂ ಸದಸ್ಯರು ಹಾಜರಿದ್ದರು.