ಚಿಕ್ಕಮಗಳೂರು: ಬಿಸಿಲ ಝಳದಿಂದ ರೋಸಿ ಹೋಗಿದ್ದ ಕಾಫಿನಾಡಿನ ಜನರಿಗೆ ಮಳೆ ತಂಪೆರೆದಿದೆ. ಕಾಫಿನಾಡಿನ ಅಲ್ಲಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಗುಡುಗು, ಸಿಡಿಲು, ಗಾಳಿ ಹಾಗೂ ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Advertisement
ಹಸಿರು ಹಾಸಿಗೆ ಹೊಂದಿರುವ ಕಾಫಿನಾಡು ಬೇಸಿಗೆಯಲ್ಲಿ ಎಷ್ಟೇ ಬಿಸಿಲಿದ್ದರೂ ಜಿಲ್ಲಾದ್ಯಂತ ಉಷ್ಣಾಂಶದ ಪ್ರಮಾಣ 30 ಡಿಗ್ರಿಗಿಂತ ಹೆಚ್ಚು ಇರುತ್ತಿರಲಿಲ್ಲ. ಆದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ತಾಪಮಾನದ ಪ್ರಮಾಣ 40 ಡಿಗ್ರಿ ಮೀರಿತ್ತು. ಪರಿಣಾಮ ಬಿಸಿಲ ಧಗೆಯಿಂದ ಜನರು ನಲುಗಿ ಹೋಗಿದ್ದರು. ಬಿಸಿಲ ತಾಪದಿಂದಾಗಿ ಶಾಲಾ ಮಕ್ಕಳು ಕೂಡ ರಜೆಯ ಸವಿ ಅನುಭವಿಸಲೂ ಸಾಧ್ಯವಾಗಿರಲಿಲ್ಲ.
ಅಲ್ಲಲ್ಲಿ ಮಳೆಯ ಹನಿಗಳು ಉದುರಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆ ಗುಡುಗು, ಸಿಡಿಲು, ಗಾಳಿಯೊಂದಿಗೆ ಸುಮಾರು 2 ಗಂಟೆಗಳ ಮಳೆ ಭೋರ್ಗರೆಯಿತು.
Related Articles
ಸಿಡಿಲಿನ ಹೊಡೆತಕ್ಕೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸಾರ್ವಜನಿಕರು, ಜಾನುವಾರುಗಳ ಪ್ರಾಣಕ್ಕೆ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
Advertisement
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೆ, ಬಯಲು ಭಾಗದ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಮಂಗಳವಾರ ಸುರಿದ ಮಳೆಯಿಂದಾಗಿ ಸದ್ಯ ಕಾಫಿನಾಡಿನಾದ್ಯಂತ ವಾತಾವರಣವೇ ಬದಲಾಗಿದ್ದು, ಎಲ್ಲೆಡೆ ತಂಪಿನ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಕೆಲ ದಿನಗಳವರೆಗೆ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು, ಕಾಫಿ, ಅಡಕೆ ಬೆಳೆಗಾರರು ಕೃಷಿ ಚಟುವಟಿಕೆಗೆ ಸಿದ್ಧತೆಗೆ ಮುಂದಾಗಿದ್ದಾರೆ. ಒಟ್ಟಾರೆ ಬಿಸಿಲಿನಿಂದ ರೋಸಿ ಹೋಗಿದ್ದ ಕಾಫಿನಾಡಿನ ಜನ ಸದ್ಯ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.