Advertisement

ಕ್ವಾರಂಟೈನ್‌ನಲ್ಲಿರುವವರಿಗೆ ಉತ್ತಮ ಆಹಾರ ನೀಡಿ

06:56 PM May 23, 2020 | Naveen |

ಚಿಕ್ಕಮಗಳೂರು: ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ನಲ್ಲಿರುವರಿಗೆ ಗುಣಮಟ್ಟದ ಆಹಾರ ನೀಡುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ದಿವ್ಯಾ ದಿನೇಶ್‌ ತಿಳಿಸಿದರು.

Advertisement

ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ನಿಲಯದಲ್ಲಿರುವ ಕ್ವಾರಂಟೈನಲ್ಲಿರುವರಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬ ದೂರುಗಳಿವೆ. ಈ ಸಂಬಂಧ ಅಧಿಕಾರಿಗಳು ಗಮನ ಹರಿಸಬೇಕು. ಕ್ವಾರಂಟೈನಲ್ಲಿರುವರನ್ನು ಮಾತನಾಡಿಸಲು ಬರುವ ಪೋಷಕರು, ಸಂಬಂಧಿಕರಿಗೆ ಅವಕಾಶ ನೀಡಬಾರದು. ಕಟ್ಟುನಿಟ್ಟಾಗಿ ಕ್ವಾರಂಟೈನ್‌ಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.

ಶೃಂಗೇರಿ ತಾಲೂಕಿನ ಮೊರಾರ್ಜಿ ವಸತಿ ಶಾಲೆಯಲ್ಲಿ 200 ಮಕ್ಕಳಿಗೆ ಕೇವಲ 20 ಲೀಟರ್‌ ಹಾಲು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಬಂದಿದೆ. ವಸತಿ ನಿಲಯದ ಬಳಿ ಹೊಂಡ ಇದ್ದು ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಶಾಲೆ ಆರಂಭಕ್ಕೂ ಮೊದಲು ಹೊಂಡವನ್ನು ಮುಚ್ಚಿಸಬೇಕು. ಜಿಲ್ಲೆಯಲ್ಲಿ ಇರುವ ಎಲ್ಲಾ ವಸತಿ ನಿಲಯಗಳಲ್ಲಿ ಸರ್ಕಾರಿ ಮಕ್ಕಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದರು.

ಸದಸ್ಯ ಶೃಂಗೇರಿ ಶಿವಣ್ಣ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಆನ್‌ಲೈನ್‌ನಲ್ಲಿ ಇತ್ತೀಚೆಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಅನುದಾನ ಬರುತ್ತಿದೆ. ಮೊದಲು ಅರ್ಜಿ ಹಾಕಿದವರಿಗೆ ಬರುತ್ತಿಲ್ಲ, ಅವರಿಗೂ ಅನುದಾನ ಬರುವಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಅಂಗವಿಕಲರ ಇಲಾಖೆ ವತಿಯಿಂದ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ ಮತ್ತು ಅಂಗವಿಕಲರಿಗೆ ಸರಿಯಾಗಿ ಸಾಮಗ್ರಿಗಳನ್ನು ವಿತರಿಸುತ್ತಿಲ್ಲ. ತಾಲೂಕಿನ ಎಲ್ಲಾ ಭಾಗದಲ್ಲೂ ಅಂಗವಿಕಲರಿಗಾಗಿ ವಿಶೇಷ ಕಾರ್ಯಾಗಾರ ಏರ್ಪಡಿಸಿ ಅಲ್ಲಿಯೇ ಸೌಲಭ್ಯಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸದಸ್ಯ ಬಣಕಲ್‌ ಶಾಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಮಳೆಯಿಂದ ಮಲೆನಾಡು ಭಾಗದಲ್ಲಿ ಶಾಲೆ ಮನೆಗಳು ಹಾಳಾಗಿದ್ದರೂ ಯಾವ ಅ ಧಿಕಾರಿಗಳು ಸಹ ದುರಸ್ತಿಗೆ ವಿಶೇಷ ಅನುದಾನಕ್ಕೆ ಸರ್ಕಾರಕ್ಕೆ ಪತ್ರ ಬರೆದಿರುವುದು ಕಾಣುತ್ತಿಲ್ಲ. ಶಾಲೆಗಳಿಗೆ ಆಗಿರುವ ದುರಸ್ತಿ ಕಾರ್ಯವನ್ನು ಶಿಕ್ಷಣ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ರಿಪೇರಿ ಮಾಡಿಸುವಂತೆ ತಿಳಿಸಿದರು. ನಮಗೆ ಬರುವ ಅನುದಾನವೇ ಕಡಿಮೆ. ಅಧಿಕಾರಿಗಳು ಇಷ್ಟು ನಿರ್ಲಕ್ಷ್ಯ ತೋರಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಸದಸ್ಯ ಕೆ.ಎಚ್‌. ಮಹೇಂದ್ರ, ಸದಸ್ಯರಾದ ಲೋಲಾಕ್ಷಿಬಾಯಿ, ನಿಖೀಲ್‌ ಚಕ್ರವರ್ತಿ, ಉಪ ಕಾರ್ಯದರ್ಶಿ ಕರೇಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next