Advertisement

ವಿದ್ಯಾರ್ಥಿ ಸಂಪರ್ಕದಲ್ಲಿದ್ದವರ ಕ್ವಾರಂಟೈನ್‌

03:33 PM Jun 13, 2020 | Naveen |

ಚಿಕ್ಕಮಗಳೂರು: ಕಡೂರು ತಾಲೂಕು ಕೆ.ದಾಸರಹಳ್ಳಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಹೇಗೆ ತಗುಲಿದೆ ಎಂದು ಖಚಿತ ಮಾಹಿತಿ ಲಭ್ಯವಾಗಿಲ್ಲ. ಸೋಂಕಿತ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಮುಂದಿನ ವಾರದೊಳಗೆ ಇವರನ್ನು ಪರೀಕ್ಷೆಗೊಳಪಡಿಸಲಾಗುವುದು. ಬಳಿಕ ಸೋಂಕಿನ ಮೂಲ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

Advertisement

ಶುಕ್ರವಾರ ಡಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆ.ದಾಸರಹಳ್ಳಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್‌ ಇರುವುದು ಗುರುವಾರ ದೃಢಪಟ್ಟಿದೆ. ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಈತನ ಸಂಪರ್ಕದಲ್ಲಿ ವಿದ್ಯಾರ್ಥಿಯ ಸ್ನೇಹಿತರು ಹಾಗೂ ಕೆಲವರು 10ನೇ ತರಗತಿ ವಿದ್ಯಾರ್ಥಿಗಳು ಇದ್ದಾರೆ. ಕೆ.ದಾಸರಹಳ್ಳಿ ಗ್ರಾಮದ ನಿರ್ದಿಷ್ಟ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ಸೋಂಕಿತ ವಿದ್ಯಾರ್ಥಿಯ ಸಂಪರ್ಕದಲ್ಲಿ ಕೆಲವರು 10ನೇ ತರಗತಿ ವಿದ್ಯಾರ್ಥಿಗಳಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೋವಿಡ್ ಪಾಸಿಟಿವ್‌ ಇರುವ ವಿದ್ಯಾರ್ಥಿ ಸೇರಿದಂತೆ ಆತನ ಸಂಪರ್ಕದಲ್ಲಿದ್ದು, ಕ್ವಾರಂಟೈನ್‌ಗೆ ಒಳಗಾಗಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಿರುವ ಎಲ್ಲ ಪಠ್ಯ ಪುಸ್ತಕಗಳನ್ನು ಒದಗಿಸಲಾಗಿದೆ ಎಂದರು.

ಸೋಂಕಿಗೆ ಒಳಗಾಗಿರುವ 10ನೇ ತರಗತಿ ವಿದ್ಯಾರ್ಥಿಗೆ ಸೈಕಾಲಾಜಿಕಲ್‌ ಕೌನ್ಸೆಲಿಂಗ್‌ ಕೂಡ ಮಾಡಲಾಗಿದೆ. ಈ ವಿದ್ಯಾರ್ಥಿಯನ್ನು ಸದ್ಯ ಚಿಕ್ಕಮಗಳೂರು ನಗರದ ಕೋವಿಡ್ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ವಿದ್ಯಾರ್ಥಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ಆತ ಶೀಘ್ರ ಗುಣಮುಖನಾಗಲಿದ್ದಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಐದರಿಂದ ಏಳು ದಿನಗಳೊಳಗೆ ಪ್ರಯೋಗಾಲಯದ ವರದಿ ಬರಲಿದೆ. ಆ ನಂತರ ವಿದ್ಯಾರ್ಥಿಯ ಸೋಂಕಿನ ಮೂಲ ತಿಳಿದು ಬರಲಿದೆ. ವಿದ್ಯಾರ್ಥಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್ ಲ್ಯಾಬ್‌ಗ ಆತನ ಗಂಟಲು ದ್ರವ, ರಕ್ತದ ಮಾದರಿಯನ್ನು ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಪಾಸಿಟಿವ್‌ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next